ನಾಳೆ ಬಿದರಹಳ್ಳಿ ನರಸಿಂಹಮೂರ್ತಿಗೆ ಅಭಿನಂದನೆ

ಹೊನ್ನಾಳಿ.ನ.೧೮; ಭಾರತೀಯ ವಿದ್ಯಾ ಸಂಸ್ಥೆ ಆವರಣದಲ್ಲಿ ನಾಡಿನ ಹೆಸರಾಂತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರಿಗೆ ಅಭಿನಂದನೆ ಹಾಗೂ ” ನೀರ ಮೇಲಣ ಹೆಜ್ಜೆ ” ಕೃತಿ ಸಮರ್ಪಣೆ ಸಮಾರಂಭವನ್ನು ನ. 19 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿದರಹಳ್ಳಿ ನರಸಿಂಹಮೂರ್ತಿ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಾ. ರಾಜ್‌ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರುಇದೇ ಸಂದರ್ಭದಲ್ಲಿ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಸ್ಥಾಪಿಸಿರುವ ” ಧಾರಿಣಿ ಪುರಸ್ಕಾರ ” ಪ್ರಶಸ್ತಿಯನ್ನು ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಸಂಗೀತಾ ಕಟ್ಟಿ ಅವರಿಗೆ ಹಾಗೂ ನಾಡಿನ ಶ್ರೇಷ್ಠ ಸಾಹಿತಿಗಳಾದ ಜಯಂತ ಕಾಯ್ಕಿಣಿ ಅವರಿಗೆ ” ಫಲ್ಗು ಕಥಾ ” ಪ್ರಶಸ್ತಿಯನ್ನು ನೀಡಲಾಗುವುದು ಎಂದರು. ವಿಮರ್ಶಕರು, ಚಿಂತಕರೂ ಆದ ಡಾ. ಬಸವರಾಜ ಕಲ್ಗುಡಿ ಅವರು ಕೃತಿಗಳ ಲೋಕಾರ್ಪಣೆ ಮಾಡಿ ಅಭಿನಂದನಾ ನುಡಿಗಳನ್ನಾಡುವರು. ಸಾಹಿತಿಗಳು, ಕನ್ನಡ ಸಹ ಪ್ರಾಧ್ಯಾಪಕರೂ ಆದ ಡಾ. ಚನ್ನೇಶ್ ಹೊನ್ನಾಳಿ ಅವರು ನೀರ ಮೇಲಣ ಹೆಜ್ಜೆ ಕೃತಿ ಸಮರ್ಪಣೆ ಮಾಡಿ ಸಂಪಾದಕರ ನುಡಿಯಾಡಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ವಿಜಯ್ ಸ್ವಾರ್ಥಿ ಮತ್ತೇರು ಅವರ ” ಚಪ್ಪಲಿಗಂಟಿದ ಮುಳ್ಳು ” ಕೃತಿ ಹಾಗೂ ಚಂದನ ಭರತ್ ಅವರ ” ಕಡಲೊಡಲು ” ಕೃತಿ, ನಿವೃತ್ತ ಉಪನ್ಯಾಸಕ ಎಸ್.ಆರ್. ಬಸವರಾಜಪ್ಪ ಅವರ ” ಹಳ್ಳಿಜೀವ ” ಕೃತಿ ಬಿಡುಗಡೆಯಾಗಲಿವೆ ಎಂದು ಅವರು ಹೇಳಿದರು. ಬಿದರಹಳ್ಳಿ ನರಸಿಂಹಮೂರ್ತಿ ಅವರ ವ್ಯಕ್ತಿತ್ವ ಕುರಿತು ಸಾಹಿತಿಗಳು, ರಂಗಕರ್ಮಿಗಳು ಆದ ಬಿ.ಆರ್. ವಿಜಯವಾಮನ್ ಮಾತನಾಡಲಿದ್ದಾರೆ. ಡಾ. ನಾ. ಕೊಟ್ರೇಶ್ ಉತ್ತಂಗಿ ಅವರ ” ವಕ್ರಸುಳಿ ” ಮತ್ತು ” ಮಂಥನ ಮಾಣಿಕ್ಯ” ಕೃತಿಗಳ ಲೋಕಾರ್ಪಣೆಯಾಗಲಿವೆ. ಬಿದರಹಳ್ಳಿಯವರ ಕಥನಕಲೆ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಮೇಟಿ ಮಲ್ಲಿಕಾರ್ಜುನ ಅವರು ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಗಡೆಕಟ್ಟೆ ಧನಂಜಯಪ್ಪ ವಹಿಸಲಿದ್ದಾರೆ ಎಂದರು.ಸಾAಸ್ಕೃತಿಕ ಕಾರ್ಯಕ್ರಮ ಸಂಜೆ 5 ಗಂಟೆಗೆ ನಡೆಯಲಿದ್ದು ನಿವೃತ್ತ ಡಿಡಿಪಿಐ ಭರಮಪ್ಪ ಮೈಸೂರು ಉಪನ್ಯಾಸ ನೀಡುವರು, ಆವರಗೆರೆ ಗುರುಸಿದ್ದಸ್ವಾಮಿ ಪವಾಡ ಗುಟ್ಟು ಬಯಲು ಕಾರ್ಯಕ್ರಮ ನಡೆಸಿಕೊಡುವರು. ಸಂಗೀತಾ ಕಾರ್ಯಕ್ರಮದಲ್ಲಿ ಯುಗಧರ್ಮ ರಾಮಣ್ಣ, ಕತ್ತಿಗೆ ಪರಮೇಶ್ವರಪ್ಪ, ಕೊಟ್ರೇಶ್ ಅಂಗಡಿ ನಡೆಸಿಕೊಡಲಿದ್ದಾರೆ.ಆದ್ದರಿಂದ ಸಾಹಿತಿಗಳು, ಅಭಿಮಾನಿಗಳು ಹಾಗೂ ಬಿದರಹಳ್ಳಿ ನರಸಿಂಹಮೂರ್ತಿಯವರ ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಯಾಗಿ ನಡೆಸಿಕೊಡಬೇಕು ಎಂದು ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿಯ ಕಾರ್ಯದರ್ಶಿ ಎಚ್.ಎಂ. ಅರುಣ್‌ಕುಮಾರ್, ಸಂಚಾಲಕರಾದ ಗೊಲ್ಲರಹಳ್ಳಿ ಮಂಜುನಾಥ್, ಡಾ. ನಾ. ಕೊಟ್ರೇಶ್ ಉತ್ತಂಗಿ, ಖಜಾಂಚಿ ಮರಿಸಿದ್ದಪ್ಪ, ಸದಸ್ಯರಾದ ಜೋಗಿಹಳ್ಳಿ ನಾಗರಾಜ್ ಉಪಸ್ಥಿತರಿದ್ದರು.