ನಾಳೆ ಬಿಜೆಪಿ ಪಟ್ಟಿ ಪ್ರಕಟ ನಿರೀಕ್ಷೆ

ಬೆಂಗಳೂರು,ಏ,೯:ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ನಿರಂತರ ಸಭೆಗಳ ನಂತರವೂ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಿದ್ದು, ನಾಳೆ ಬಿಜೆಪಿ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಇಂದು ಇಡೀ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದರಾದರೂ ಟಿಕೆಟ್ ಹಂಚಿಕೆಯ ಕಗ್ಗಂಟು ಬಗೆಹರಿಯಲಿಲ್ಲ.
ಇಂದೂ ಸಹ ಬೆಳಿಗ್ಗೆನಿಂದಲೇ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಂಜೆ ೫ ಗಂಟೆಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮರೂಪ ನೀಡಲಾಗುತ್ತದೆ. ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾದರೆ ನಾಳೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಪ್ರತಿ ಕ್ಷೇತ್ರಕ್ಕೂ ೨-೩ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿರುವುದರಿಂದ ಬಂಡಾಯಕ್ಕೆ ಆಸ್ಪದವಾಗದಂತೆ ಗೆಲುವಿನ ಮಾನದಂಡ ಮತ್ತು ಸಮೀಕ್ಷೆಗಳನ್ನಾಧರಿಸಿ ವರಿಷ್ಠರು ಟಿಕೆಟ್‌ನ್ನು ಅಂತಿಮಗೊಳಿಸುವ ಕಸರತ್ತನ್ನು ನಡೆಸಿದ್ದಾರೆ.
ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿರೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರಪ್ರಧಾನ್, ಮನ್ಸೂಕ್ ಮಾಂಡವಿಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್, ಸಿ.ಟಿ ರವಿ ಇವರುಗಳು ಪಾಲ್ಗೊಳ್ಳಲಿದ್ದು, ಇಂದು ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ನಾಳೆ ಪಟ್ಟಿ ಪ್ರಕಟವಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.