ನಾಳೆ, ಬಜ್ಜಿ, ಕಾಫಿ ಮಾರಾಟ ಮಾಡಿ ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು, ಏ.೧-ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದಿನಿಂತ ಸರಣಿ ಪ್ರತಿಭಟನೆಗೆ ಕರೆ ನೀಡಿರುವ ರಾಜ್ಯ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು, ಕಪ್ಪು ಪಟ್ಟಿ ಧರಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದಲ್ಲಿಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗದ ನೌಕರರು ಕಪ್ಪು ಪಟ್ಟಿ ಧರಿಸಿ, ಕರ್ತವ್ಯಕ್ಕೆ ಹಾಜರಾಗಿ ಗಮನ ಸೆಳೆದರು.
ಇಂದು ಸಂಜೆಹೊತ್ತಿಗೆ ಮತ್ತೊಂದು ಸುತ್ತಿನ ಮಾತುಕತೆಗೆ ಸಾರಿಗೆ ಇಲಾಖೆ ನಮ್ಮನ್ನು ಆಹ್ವಾನಿಸಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮು?ರ ಕೈ ಬಿಡಲು ಸಿದ್ಧ. ಅಲ್ಲದೆ, ಸಾರಿಗೆ ನೌಕರರನ್ನು ೬ನೇ ವೇತನ ಆಯೋಗದ ಅಡಿ ತರಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಧರಣಿ ನಿರತ ನೌಕರರು ತಿಳಿಸಿದರು.
ನೌಕರರು ಈ ಮೊದಲು ನಡೆಸಿದ ಪ್ರತಿಭಟನೆ ವೇಳೆ ಮಂಡಿಸಲಾಗಿದ್ದ, ೯ ಬೇಡಿಕೆಗಳ ಪೈಕಿ ೮ ಅನ್ನು ಈಡೇರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಅವು ನ್ಯೂನ್ಯತೆಯಿಂದ ಕೂಡಿವೆ. ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತಂತೆ ಈವರೆಗೆ ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಸೇವೆಯ ಬೇಡಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ೨೦೧೬ರ ಸುತ್ತೋಲೆಯನ್ನೆ ಮುಂದುವರಿಸಲಾಗಿದೆ. ಅಂತರ್ ನಿಗಮಗಳ ವರ್ಗಾವಣೆ ಪದ್ಧತಿ ವೈಜ್ಞಾನಿಕವಾಗಿ ಶಿಕ್ಷಕರ ಕೌನ್ಸಲಿಂಗ್ ಮಾದರಿಯಲ್ಲಿ ನಡೆಯಬೇಕೆಂದು ಕೇಳಲಾಗಿತ್ತು. ಹಲವಾರು ನಿಬಂಧನೆಗಳನ್ನು ಹಾಕಿ ಶೇ.೨ರ? ವರ್ಗಾವಣೆಗೆ ಅವಕಾಶ ನೀಡಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಘಟಕಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳು ಹೆಚ್ಚುತ್ತಿವೆ ಎಂದು ನೌಕರರು ಬೇಸರ ವ್ಯಕ್ತಪಡಿಸಿದರು.
ಇಂದಿನಿಂದ ಸರಣಿ ಪ್ರತಿಭಟನೆ: ಇಂದಿನಿಂದ ಏ.೬ರವರೆಗೆ ಸಂಸ್ಥೆಯ ಎಲ್ಲಾ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರ ಗಮನ ಸೆಳೆಯಲಿದ್ದಾರೆ. ನಾಳೆ(ಏ.೨) ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ ಮತ್ತು ಬಜ್ಜಿ, ಬೋಂಡಾಗಳನ್ನು ತಯಾರಿಸಿ ನೌಕರರು ಮಾರಾಟ ಮಾಡಲಿದ್ದಾರೆ.
ಅದೇ ರೀತಿ, ಏ.೩ರಂದು ನೌಕರರು ಮತ್ತು ಕುಟುಂಬದ ಸದಸ್ಯರು ನಗರದ ಮುಖ್ಯ ವೃತ್ತಗಳಲ್ಲಿ ಮಾನವ ಸರಪಣಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟಿಸಲಿದ್ದಾರೆ. ಏ.೪ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಬೇಡಿಕೆಗಳನ್ನು ಮಂಡಿಸಲಾಗುವುದು.
ಏ.೫ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಏ.೬ರಂದು ನೌಕರರ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೋರಾಟದ ನೇತೃತ್ವವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.