ನಾಳೆ ಬಜೆಟ್ ಮಂಡನೆ ಸಿಎಂ ಗ್ಯಾರಂಟಿ ಸವಾಲು

ಬೆಂಗಳೂರು, ಫೆ. ೧೫- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ರಾಜ್ಯದ ಬಜೆಟ್ ಮಂಡಿಸಲಿದ್ದು, ಬಜೆಟ್‌ನಲ್ಲಿ ಯಾವೆಲ್ಲಾ ಹೊಸ ಕಾರ್ಯಕ್ರಮಗಳು ಇರುತ್ತವೆ, ಅಭಿವೃದ್ಧಿ ಕಾರ್ಯಗಳಿಗೆ ಎಷ್ಟೆಲ್ಲಾ ಅನುದಾನ ಒದಗಿಸಲಾಗುತ್ತದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆಗ ಯಾವ ರೀತಿ ಸಂಪನ್ಮೂಲ ಕ್ರೂಢೀಕರಿಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ೨ನೇ ಅವಧಿಯ ಬಜೆಟ್ ಮಂಡಿಸುತ್ತಿದ್ದು, ಈ ಬಜೆಟ್‌ನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಏನೆಲ್ಲಾ ಜನಪರ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಹಣಕಾಸು ಸಚಿವರಾಗಿ ದಾಖಲೆಯ ೧೫ನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನ ದಿಕ್ಕು ದೆಸೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ನಾಳಿನ ಬಜೆಟ್ ಹೊಸ ಜನಪರ ಕಾರ್ಯಕ್ರಮಗಳ ಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಏನೆಲ್ಲಾ ಅನುದಾನ ಒದಗಿಸುತ್ತಾರೆ ಎಂಬುದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿವೆ.ಕಳೆದ ವರ್ಷ ೩.೨೫ ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಗಾತ್ರ ೩.೮೦ ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಬೆಳಿಗ್ಗೆ ೧೦.೧೫ಕ್ಕೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಕಳೆದ ಸಾಲಿನ ಬಜೆಟ್‌ನಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ೫ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಜೆಟ್‌ನಲ್ಲೂ ಈ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಢೀಕರಿಸುವ ಜತೆಗೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಒದಗಿಸುವ ಸವಾಲು ಇದೆ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಕಳೆದ ವರ್ಷ ಸಿಕ್ಕಿಲ್ಲ ಎಂಬ ಕೂಗಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಾಲಿನ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಒದಗಿಸಿ ಟೀಕಾಕರರ ಬಾಯಿ ಮುಚ್ಚಿಸುವ ಕೆಲಸ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರದಿಂದ ಅನುದಾನ ತಾರತಮ್ಯ, ತೆರಿಗೆ ಪಾಲಿನ ಕಡಿತ, ರಾಜ್ಯದ ತೆರಿಗೆ ಸಂಗ್ರಹ ನಿಗದಿತ ಗುರಿ ಸಾಧಿಸದಿರುವ ನಡುವೆಯೇ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುತ್ತಿದ್ದು, ಸಂಪನ್ಮೂಲ ಕ್ರೂಢೀಕರಣಕ್ಕೆ ಏನೆಲ್ಲಾ ಕಸರತ್ತು ನಡೆಸಿದ್ದಾರೆ ಎಂಬುದು ನಾಳಿನ ಬಜೆಟ್‌ನಲ್ಲಿ ಜಗಜ್ಜಾಹೀರಾಗಲಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಬರ ನಿರ್ವಹಣೆ ನಡುವೆಯೇ ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಎಷ್ಟೆಲ್ಲಾ ಅನುದಾನ ನೀಡಲು ಸಾಧ್ಯವಾಗುತ್ತದೆ ಎಂಬುದು ನಾಳಿನ ಬಜೆಟ್‌ನಲ್ಲಿ ಗೊತ್ತಾಗಲಿದೆ.
ಬರ ನಿರ್ವಹಣೆಗೆ ಕೇಂದ್ರದಿಂದ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ವರೆಗೂ ಬರ ಪರಿಸ್ಥಿತಿಯನ್ನು ನಿರ್ವಹಿಸಲು ಬಜೆಟ್‌ನಲ್ಲಿ ಎಷ್ಟು ಅನುದಾನ ಒದಗಿಸುತ್ತಾರೆ, ಬರ ಪೀಡಿತ ಜನರ ನೆರವಿಗೆ ಘೋಷಿಸುತ್ತಾರೆ ಎಂಬುದು ನಾಳಿನ ಬಜೆಟ್‌ನಲ್ಲಿ ಗೊತ್ತಾಗಲಿದೆ.
ಸಾಲ ಮನ್ನಾ ನಿರೀಕ್ಷೆ
ಬರದಿಂದ ಸಂಕಷ್ಟದಲ್ಲಿರುವ ನಾಡಿನ ರೈತಾಪಿ ಜನರ ನೆರವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಲ ಮನ್ನಾ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡುತ್ತಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ನಾಡಿನ ರೈತಾಪಿ ವರ್ಗ ಕೃಷಿ ಸಾಲ ಮನ್ನಾ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಕೃಷಿ ಸಾಲ ಮನ್ನಾ ಮಾಡಿದ್ದರು. ಅದನ್ನು ಮತ್ತೆ ನಾಳಿನ ಬಜೆಟ್‌ನಲ್ಲಿ ಪುನರಾವರ್ತಿಸುವರೇ ಎಂಬ ನಿರೀಕ್ಷೆಯಲ್ಲಿ ನಾಡಿನ ಅನ್ನದಾತ ಇದ್ದಾನೆ.ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಚೇತರಿಕೆಯನ್ನು ಕಾಯ್ದುಕೊಳ್ಳುವ ಸಮತೋಲಿತ ಬಜೆಟ್ ಮಂಡಿಸುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಇದೆ. ರಾಜಸ್ವ ಸಂಗ್ರಹ ಗುರಿಯನ್ನು ಹೆಚ್ಚಿಸುವ ಜತೆಗೆ ಆದ್ಯತಾ ಕ್ಷೇತ್ರಗಳಾದ ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.ನಾಳಿನ ಬಜೆಟ್ ಬಗ್ಗೆ ಹಲವು ನಿರೀಕ್ಷೆ, ಕುತೂಹಲಗಳ ನಡುವೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಸರ್ವ ಜನರನ್ನು ಓಲೈಸುವ ಬಜೆಟ್‌ನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.