ನಾಳೆ ಪ್ರಕಾಶ್ ರಾಜ್ ಅವರ ಗಾಯಗಳು ನಾಟಕ ಪ್ರದರ್ಶನ

ಸಂಜೆವಾಣಿ ನ್ಯೂಸ್
ಮೈಸೂರು: ಜು.29:- ನಟ ಪ್ರಕಾಶ್ ರಾಜ್ ಅವರೇ ನಿರ್ಮಿಸಿದ ನಿರ್ಮಾಣ ಸಂಸ್ಥೆಯಾದ ನಿರ್ದಿಗಂತದಿಂದ ಪ್ರಸ್ತುತ ಘಟನೆಗಳ ಕುರಿತಾಗಿ ನಿರ್ಮಾಣವಾಗಿರುವ ಗಾಯಗಳು ಎಂಬ ನಾಟಕ ನಾಳೆ ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್ ತಿಳಿಸಿದರು.
ಶ್ರೀರಂಗಪಟ್ಟಣದ ಬಳಿ ಇರುವ ಫಾರಂಹೌಸ್ ಬಳಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವೇ ನಿರ್ಮಾಣ ಮಾಡಿರುವ ನಿರ್ದಿಗಂತ ಎಂಬ ನಟನಾ ಪ್ರಯೋಗ ಶಾಲೆಯಲ್ಲಿ ಬೇರೆ ಬೇರೆ ನಟನಾ ಶಾಲೆಗಳಿಂದ ಕಲಿತು ಬಂದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿರುವ ಅವರು, ಶ್ರೀಪಾದಭಟ್ ಅವರ ನಿರ್ದೇಶನದ 14ಕ್ಕೂ ಹೆಚ್ಚು ಪಾತ್ರಧಾರಿಗಳನ್ನ ಒಳಗೊಂಡ ಗಾಯಗಳು ಎಂಬ ನಾಟಕವನ್ನು ಪ್ರದರ್ಶಿಸುವುದಾಗಿ ಹೇಳಿದರು.
ಕೋಮುಗಲಭೆ ಕುರಿತ ನಾಟಕ :
ಪ್ರಕಾಶ್ ರಾಜ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ ಗಾಯಗಳು ಎಂಬ ನಾಟಕವು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾಗತಿಕ ಯುದ್ಧ, ಕೊಮಗಲಭೆ, ಮಹಿಳೆಯರು ಮೇಲಿನ ದೌರ್ಜನ್ಯ ಸೇರಿದಂತೆ ಪ್ರಮುಖವಾಗಿ ನಡೆಯುತ್ತಿರುವ ಘಟನಾವಳಿಗಳ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದ್ದು, ಸಮಾಜದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಕಲಹಗಳ ಬಗ್ಗೆ ಜನರು ಅರಿತಿದ್ದಾರೆ. ಕಲೆ ಒಂದು ಭಾಷೆ, ಈ ಭಾಷೆಯ ಮೂಲಕ ಅವುಗಳನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದರು.
ಹಲವು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲುವ ಗಾಯಗಳು ನಾಟಕ:
ಗಾಯಗಳು ಎಂದರೆ ಯುದ್ಧ, ಗಲಾಟೆ, ಕೋಮುಗಲಭೆ ಸೇರಿದಂತೆ ಹಲವು ರೀತಿಯ ನೋವಿನ ಪ್ರದರ್ಶನ ಇದಾಗಿದ್ದು. ನಮ್ಮ ಸಂಸ್ಥೆಯು ರಾಜ್ಯದ ನಾನಾ ಕಡೆಗಳಿಂದ ಬಂದ ಕಲಾವಿದರಿಗೆ ಪೆÇ್ರೀತ್ಸಾಹ ನೀಡುವ ಸಂಸ್ಥೆಯಾಗಿದ್ದು. ಇದರಲ್ಲಿ ಮಣಿಪುರ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವಂತಹ ನಾಟಕ ಇದಾಗಿದೆ. ಹತ್ಯೆಯಿಂದ ನೋವಾಗಿರುವ ಹೆಣ್ಣು ಮಗಳು ನಮ್ಮ ಮನೆಯವಳು ಎಂದುಕೊಳ್ಳಬೇಕು. ನಮ್ಮ ಬೆರಳಿಗೆ ಪೆಟ್ಟಾದರೆ ಅದು ನಮಗೆ ಗಾಯ, ಅದೇ ಏಕಲವ್ಯನ ಬೆರಳಿಗಾದರೆ ಅದು ಸಮಾಜಕ್ಕೆ ಆದ ಗಾಯ ಎಂದು ಪ್ರಕಾಶ್ ರಾಜ್ ಹೆಣ್ಣುಮಕ್ಕಳ ಮೇಲೆ ನಡಯುತ್ತಿರುವ ಕಿರುಕುಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಗಸ್ಟ್ 1 ರಂದು ಕಲಾಮಂದಿರದ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ ಗಾಯಗಳು ನಾಟಕವನ್ನು ಪ್ರದರ್ಶಿಸಲಾಗುವುದು. ನಂತರ ರಾಜ್ಯದ ಸುಮಾರು 60 ಕಡೆಗಳಲ್ಲಿ ಈ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ, ಇದಾದ ಬಳಿಕ ನಾಟಕಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನೋಡಿಕೊಂಡು ಇನ್ನಷ್ಟು ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.