ನಾಳೆ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವ


ಬೆಂಗಳೂರು, ಅ. ೩೧- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ದಿನದಂದು ಪ್ರತಿಷ್ಠಿತ ’ಕರ್ನಾಟಕ ರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಾಳೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯ ಲಿರುವ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ.
ಈ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿ ಕಾಂತ್ ಹಾಗೂ ಜ್ಯೂ.ಎನ್ ಟಿ ಆರ್ ಆಗಮಿ ಸುತ್ತಿರುವುದು ವಿಶೇಷ.
ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿತ್ತು. ಈ ಬಗ್ಗೆ ಇಂದು ಸಿಎಂಗೆ ಪತ್ರ ಬರೆದು ರಜನಿಕಾಂತ್ ಅವರು ದೃಢಪಡಿಸಿದ್ದಾರೆ. ಈ ಸಮಾರಂಭಕ್ಕೆ ಪುನೀತ್ ಅವರ ಕುಟುಂಬಸ್ಥರಿಗೆ ಪ್ರಶಸ್ತಿ ನೀಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಕರ್ನಾಟಕ ಸರ್ಕಾರದ ಆಹ್ವಾನ ಮನ್ನಿಸಿ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ರಜನಿಕಾಂತ್ ಅಭಿನಂದನೆ ತಿಳಿಸಿದರು. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲು ಜ್ಯೂ. ಎನ್ ಟಿ ಆರ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡುತ್ತಿರುವುದನ್ನು ವೀಕ್ಷಿಸಲು ಸರ್ಕಾರವು ಜನರಿಗೆ ೫,೦೦೦ ಪಾಸ್‌ಗಳನ್ನು ವಿತರಿಸಿದೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಸಂಜೆ ೪ ಗಂಟೆಗೆ ಗಾಯಕ ವಿಜಯ್ ಪ್ರಕಾಶ್ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಕರ್ನಾಟಕ ರತ್ನ ಪ್ರಶಸ್ತಿಯು ಸಂಪೂರ್ಣ ಬೆಳ್ಳಿ ಫಲಕ ಮತ್ತು ೫೦ ಗ್ರಾಂ ಚಿನ್ನದ ಪದಕವನ್ನು ಹೊಂದಿರುತ್ತದೆ. ಸರ್ಕಾರವು ಈ ಕಾರ್ಯಕ್ರಮವನ್ನು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲು ಬಯಸಿತ್ತು. ಪುನೀತ್ ಅವರ ಕುಟುಂಬದ ಅಪೇಕ್ಷೆಯಂತೆ ವಿಧಾನಸೌಧದ ಮುಂದೆ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಪಾಸ್ ಇಲ್ಲದ ಜನರಿಗೆ ಸರ್ಕಾರ ಅವಕಾಶ ನೀಡಲಾಗುತ್ತದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಲ್ಲಾ ಸಚಿವರು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.