
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ನಗರದ ರಂಗತೋರಣ, ಬಳ್ಳಾರಿಯ ಅಂಗಸಂಸ್ಥೆ ಅಕ್ಷರ ತೋರಣ ಪ್ರಕಟಿಸಿರುವ ‘ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲವಾನ್ ಪಿಂಜಾರ ರಂಜಾನ್ ಸಾಬ್’ ಪುಸ್ತಕದ ಲೋಕಾರ್ಪಣೆ ಸಮಾರಂಭ ಇದೇ ಏಪ್ರೀಲ್ 2, ರವಿವಾರ ಬೆಳಗಿನ 11 ಗಂಟೆಗೆ ನಗರದ ರಾಘವ ಕಲಾಮಂದಿರದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಟಕಪೂರ್ವ ಜಿಲ್ಲಾಧ್ಯಕ್ಷ, ಸಾಹಿತಿ ಸಿದ್ಧರಾಮ ಕಲ್ಮಠ ಅವರು ರಚಿಸಿರುವ ಈ ಕೃತಿಯನ್ನು ಬೆಂಗಳೂರಿನ ಸಾಮಾಜಿಕ ಸಾಮರಸ್ಯ ಕಾರ್ಯ ನೇತಾರ, ಖ್ಯಾತ ಅಂಕಣಕಾರರಾದ ವಾದಿರಾಜ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ಸಮಾರಂಭದಲ್ಲಿ ಪಿಂಜಾರ ರಂಜಾನ್‍ಸಾಬ್ ಅವರ ಭಾವಚಿತ್ರಗಳನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೆಚ್.ಎಂ. ಗುರುಸಿದ್ಧಸ್ವಾಮಿ ಬಿಡುಗಡೆಗೊಳಿಸಲಿದ್ದಾರೆ.
ಈ ಪುಸ್ತಕಕ್ಕೆ ಮುನ್ನುಡಿ ಬರೆದ ಬೆಂಗಳೂರು ವಿ.ವಿ.ಯ ಪ್ರಾಧ್ಯಾಪಕರಾದ ಡಾ. ರಾಜಪ್ಪ ದಳವಾಯಿ ಯವರು ಕರ್ನಾಟಕ ಏಕೀಕರಣ ಹಾಗೂ ರಂಜಾನ್‍ಸಾಬ್ ಅವರ ಕುರಿತು ಮಾತನಾಡಲಿದ್ದಾರೆ. ಕರ್ನಾಟಕ ರಾಜ್ಯ ಪಿಂಜಾರ/ನದಾಫ್ ಸಂಘದ ಅಧ್ಯಕ್ಷರಾದ ಚಿತ್ರದುರ್ಗದ ಜಲೀಲಸಾಬ್, ಪಿಂಜಾರ ಸಮಾಜದ ಹಿರಿಯ ಮುಖಂಡ ಉದ್ಯಮಿಗಳಾದ ಶ್ರೀ ದಾದ ಖಲಂದರ್ ಹಾಗೂ ಹುತಾತ್ಮ ಬಲಿದಾನಿ ರಂಜಾನ್ ಸಾಬ್ ಅವರ ಮೊಮ್ಮಗ ಶ್ರೀ ಶರ್ಮಾಸ್ ವಲಿ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ನಾಡ ತಾಯಿಗೆ ನಮನ
ರಂಜಾನ್ ಸಾಬ್ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ನಾಡತಾಯಿ ಕರ್ನಾಟಕ ಮಾತೆಗೆ ನಮನ ಸಲ್ಲಿಸುವ ಕನ್ನಡ ಹಾಗೂ ಜಾನಪದ ಗೀತೆಗಳನ್ನು ನಗರದ ಜನಪ್ರಿಯ ಗಾಯಕ ಯಲ್ಲನಗೌಡ ಶಂಕರಬಂಡೆ ಅವರು ಪ್ರಸ್ತುತಪಡಿಸಲಿದ್ದಾರೆ.
ರಾಜ್ಯ ಪ್ರಶಸ್ತಿಗಾಗಿ ಗೌರವ ಸನ್ಮಾನ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ವಿಭಾಗದಲ್ಲಿ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳ ಪುರಸ್ಕೃತರನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಅವರಲ್ಲಿ 2021-22ರ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಕೊಪ್ಪಳ ಜಿಲ್ಲೆ ಕುಕನೂರಿನ ಬಾಬಣ್ಣ ಕಲ್ಮನಿ, 2021-22 ಹವ್ಯಾಸಿ ರಂಗದ ಬಿ.ವಿ. ಕಾರಂತ ಪ್ರಶಸ್ತಿ ಪುರಸ್ಕೃತರಾದ ಹೊಸಪೇಟೆಯ ಪಿ.ಅಬ್ದುಲ್ ಸಾಬ್ ಹಾಗೂ ವರ್ಣ ಶಿಲ್ಪಿಗಳಿಗಾಗಿ ಜಕಣಾಚಾರಿ ಪ್ರಶಸ್ತಿ ಗಳಿಸಿದ ಹಂಪಿ ಕನ್ನಡ ವಿ.ವಿ. ಕಲಾವಿದ ಡಿ.ಹುಸೇನ್ ಸಾಬ್ ಅವರನ್ನು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು.
ಕರ್ನಾಟಕ ಜನತೆ ಮರೆತೇ ಬಿಟ್ಟಿರುವ ಮಹಾನುಭಾವರಾಗಬಹುದಾದ ಸಾಮಾನ್ಯ ರಂಜಾನ್ ಸಾಬ್ ಕನ್ನಡ ನಾಡು ನುಡಿಗಾಗಿ ಅಷ್ಟೇ ಅಲ್ಲದೇ ಬಳ್ಳಾರಿಯನ್ನು ಕರ್ನಾಟಕದಲ್ಲೇ ಉಳಿಸಲು ಹೋರಾಡಿ ಹುತಾತ್ಮರಾದ ಏಕೈಕ ಬಲಿದಾನಿ ಪೈಲವಾನ್ ಪಿಂಜಾರ ರಂಜಾನ್ ಸಾಬ್ ಕನ್ನಡ ಹಾಗೂ ಕರ್ನಾಟಕ ಜನತೆ ಅದರಲ್ಲೂ ಬಳ್ಳಾರಿಗರು ಸ್ಮರಿಸಲೇಬೇಕಾದ ರಂಜಾನ್ ಸಾಬ್‍ರ ಕುರಿತಾಗಿ ಅಕ್ಷರ ತೋರಣ ಸಂಸ್ಥೆಗಾಗಿ ಸಾಹಿತಿ ಸಿದ್ಧರಾಮ ಕಲ್ಮಠ ಅವರು ರಚಿಸಿ ಕೊಟ್ಟಿದ್ದು ಅಕ್ಷರ ತೋರಣದ ಮೂರನೆಯ ಪುಷ್ಪವಾಗಿ ಈ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಈ ಮೊದಲು ಗಾನಕೋಗಿಲೆ ಸುಭದ್ರಮ್ಮ ಮನ್ಸೂರು ಹಾಗೂ ಗಾನ ಮಾಂತ್ರಿಕ ಗೋನಾಳ ಇಸ್ಮಾಯಿಲ್ ಅವರ ಕುರಿತ ಕೃತಿಗಳನ್ನು ಅಕ್ಷರ ತೋರಣ ಪ್ರಕಟಿಸಿದೆ.
ಇದೇ ಭಾನುವಾರ ಬೆ. 11 ಕ್ಕೆ ನಗರದ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ‘ಕರ್ನಾಟಕ ಏಕೀಕರಣ ಏಕೈಕ ಬಲಿದಾನ ಪೈಲವಾನ್ ಪಿಂಜಾರ ರಂಜಾನ್ ಸಾಬ್’ ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಪುಸ್ತಕ ಹಾಗೂ ಭಾವಚಿತ್ರಗಳನ್ನು ಬಿಡುಗಡೆ ರಿಯಾಯಿತಿ ಬೆಲೆಯಲ್ಲಿ ನೀಡಲಾಗುವುದು. ನಾಗರಿಕರು ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಏಕೈಕ ಬಲಿದಾನಿ ಅವರ ಸ್ಮರಣೆಯ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಕೋರಿದ್ದಾರೆ.