ನಾಳೆ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
 ಮೇಯರ್ ಮೂಡದ ಒಮ್ಮತ, ಉಪಮೇಯರ್ ಜಾನಕಮ್ಮ ಖಚಿತ


* ಮೇಯರ್ ಸ್ಪರ್ಧೆಯಲ್ಲಿ ಉಮಾದೇವಿ ಶಿವರಾಜ್, ವಿ.ಕುಬೇರ, ತ್ರಿವೇಣಿ ಮತ್ತು ಶ್ವೇತ
* ತೀರ್ಮಾನ ಪಕ್ಷದ್ದೇ, ಆಂತರಿಕ ಆಯ್ಕೆಯೇ
* ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಿಂದ ಶಾಸಕ ನಾಗೇಂದ್ರ ಅಂತರ
* ಅಲ್ಲಂ ವೀರಭದ್ರಪ್ಪ ನೇತೃತ್ವ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ನಾಳೆ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಲಿದೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ, ಉಪ ಮೇಯರ್ ಎಸ್ಟಿ ಮಹಿಳೆಗೆ ಮೀಸಲಿದೆ. ಉಪಮೇಯರ್ ಸ್ಥಾನಕ್ಕೆ 35ನೇ ವಾರ್ಡಿನ ಸದಸ್ಯೆ ಜಾನಕಮ್ಮ ಬಹುತೇಕ ಖಚಿತವಾಗಿದೆ.
ಮೇಯರ್ ಸ್ಥಾನಕ್ಕಾಗಿ ವಿ.ಕುಬೇರ, ಉಮಾದೇವಿ ಶಿವರಾಜ್, ಶ್ವೇತ ಸೋಮು, ತ್ರಿವೇಣಿ ಸೂರಿ ಅವರ ನಡುವೆ ಪೈಪೋಟಿ ನಡೆದಿದೆ. ಕಳೆದ 3 ದಿನಗಳಿಂದ ಸಭೆಯ ಮೇಲೆ ಸಭೆ ನಡೆಯುತ್ತಿದೆ. ಒಮ್ಮತಕ್ಕೆ ಮಾತ್ರ ಬರುತ್ತಿಲ್ಲ. ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರು ಲೀಡ್ ತೆಗೆದುಕೊಂಡಿದ್ದಾರೆ. ಇಂದು ಬೆಳಿಗ್ಗೆ ಸಹ ಸಭೆ ಕರೆದಿತ್ತು. ಆದರೆ ನಡೆಯಲಿಲ್ಲ. ಕಾರಣ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಗ್ರಾಮೀಣ ಶಾಸಕ ನಾಗೇಂದ್ರ ನಗರದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ಬಾರಿಯಂತೆ ಕೆಪಿಸಿಸಿಯಿಂದ ವೀಕ್ಷಕರು ಇಂದು ಸಂಜೆ ಬಂದು ಆಯ್ಕೆ ಪ್ರಕ್ರಿಯೆ ನಡೆಸಿ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಡಲಿದ್ದಾರೆಂಬ ಮಾತುಗಳು ಕೇಳಿ ಬಂದಿವೆ.
ಸ್ಥಳೀಯವಾಗಿ ಆಂತರಿಕ ಆಯ್ಕೆ ನಡೆಸಿ ನಮ್ಮಲ್ಲಿಯೇ ಒಗ್ಗಟ್ಟು ಕಾಯ್ದುಕೊಳ್ಳುವ ಕೆಪಿಸಿಸಿಗೆ ಬಿಟ್ಟರೆ ಕಳೆದ ಬಾರಿಯಂತೆ ಗೊಂದಲಕ್ಕೀಡಬೇಕಾಗುತ್ತದೆಂಬ ಮಾತು ಸದಸ್ಯರುಗಳದ್ದಾಗಿದೆ. ಯಾರಿಗೆ ಮೇಯರ್ ಪಟ್ಟ ಎಂಬುದನ್ನು ನಾಳೆವರೆಗೂ ಕಾದುನೋಡಬೇಕಿದೆ.