ನಾಳೆ ಪಕ್ಷೇತರ ಅಭ್ಯರ್ಥಿಯಾಗಿ ಆರ್.ಡಿ ಪಾಟೀಲ್ ನಾಮಪತ್ರ ಸಲ್ಲಿಕೆ

ಅಫಜಲಪುರ: ಎ.16:ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಆರ್.ಡಿ ಪಾಟೀಲ್ ನಾಳೆ 11 ಗಂಟೆಗೆ (ಏ.17) ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮುಖಂಡ ಮಹಾಂತೇಶ್ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರುನ್ಯಾಯಾಂಗ ಬಂಧನದಲ್ಲಿರುವ ಆರ್. ಡಿ ಪಾಟೀಲ್ ಅವರು ನಾಮಪತ್ರ ಸಲ್ಲಿಸಲು ಘನ ನ್ಯಾಯಾಲಯ ಅನುಮತಿ ನೀಡಿದೆ. ಹೀಗಾಗಿ ಪೆÇೀಲಿಸ್ ಬೆಂಗಾವಲಿನಲ್ಲಿ ಅಫಜಲಪುರಕ್ಕೆ ಆಗಮಿಸುವ ಆರ್.ಡಿ ಪಾಟೀಲ್ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ಅಫಜಲಪುರ ಮತಕ್ಷೇತ್ರದಾದ್ಯಂತ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಸಿಡಿದೆದ್ದು ಹಲವು ಆರೋಪಗಳನ್ನು ಮಾಡಿದ್ದಾರೆ. ಹಾಲಿ ಹಾಗೂ ಮಾಜಿ ಶಾಸಕರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ತಾಲೂಕಿನಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಮಾಡಿಲ್ಲ. ರಸ್ತೆ ಕಾಮಗಾರಿ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳಿಂದ ನಾವೆಲ್ಲ ವಂಚಿತರಾಗಿದ್ದೇವೆ ಎಂದು ಅನೇಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಆರ್. ಡಿ ಪಾಟೀಲ ಅವರು ಚುನಾವಣೆಯಲ್ಲಿ ಗೆದ್ದು ಬರಲು ತಾವೆಲ್ಲರೂ ಸಹಕರಿಸಬೇಕು.
ಈಗಾಗಲೇ ನಾವು ಕೋವಿಡ್ ನಂತಹ ತುರ್ತು ಸಂದರ್ಭದಲ್ಲಿ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿದ್ದೇವೆ. ಸಾಮೂಹಿಕ ವಿವಾಹ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದ್ದೇವೆ. ಹೀಗಾಗಿ ನಮ್ಮ ಸೇವೆಯನ್ನು ಪರಿಗಣಿಸಿ ಮತಕ್ಷೇತ್ರದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ನಮಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಬಸವರಾಜ ಪಾಟೀಲ ಅಳ್ಳಗಿ ಮಾತನಾಡಿ ಆರ್ ಡಿ ಪಾಟೀಲ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಸೂಲೇಕರ್, ಹೀರೂ ರಾಠೋಡ, ರವಿ ಸಿಂಗೆ, ಅಂಬಣ್ಣ ನಾಯ್ಕೋಡಿ, ಸಿದ್ದಾರಾಮ ಜವಳಿ ಇತರರಿದ್ದರು.