ನಾಳೆ, ನಾಡಿದ್ದು ವಿಕೆಂಡ್ ಕಫ್ರ್ಯೂ: ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ರಾಮಚಂದ್ರನ್ ಸೂಚನೆ

ಬೀದರ:ಎ.23: ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ಕ್ರಮಗಳನ್ನು ಬಿಗಿಗೊಳಿಸಬೇಕಾಗಿದೆ. ಆದ್ದರಿಂದ ಮೇ 4ರ ವರೆಗೆ ಜಿಲ್ಲೆಯಾದ್ಯಂತ ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳಂದು ಹಗಲು ರಾತ್ರಿ ವೇಳೆಯಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಅನ್ವಯವಾಗುವಂತೆ ವಿಕೆಂಡ್ ಕಫ್ರ್ಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಹಸೀಲ್ದಾರ ಸೇರಿದಂತೆ ಎಲ್ಲ ತಾಲೂಕುಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಕೆಂಡ್ ಕಫ್ರ್ಯೂ ಜಾರಿ ಮಾಡಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಈಗಾಗಲೇ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಅದರಂತೆ ಶನಿವಾರ ಮತ್ತು ಭಾನುವಾರಗಳಂದು ಕೆಲವು ಅವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಮತ್ತು ಪ್ರಮುಖ ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ಇರಲಿದೆ ಎನ್ನುವ ಮಾಹಿತಿಯನ್ನು ಜನರಿಗೆ ತಲುಪಿಸಲು ತಾಲೂಕುಮಟ್ಟದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಸಾರ್ವಜನಿಕರಿಗೆ ಅವಶ್ಯಕವಾಗಿರುವ ನೆರೆಹೊರೆ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಹಾಲು, ಮಾಂಸ ಹಾಗೂ ಮೀನು ಮಾರಾಟಕ್ಕೆ ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ವಿಕೆಂಡ್ ಕಫ್ರ್ಯೂದ ಈ ಎರಡು ದಿನಗಳಂದು ಕೂಡ ಜಿಲ್ಲೆಯಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ. ಔಷಧಿ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಿದೆ. ಕೋವಿಡ್ ಲಸಿಕೆ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಈ ಎರಡು ದಿನಗಳಂದು ದೇವಸ್ಥಾನ, ಚರ್ಚ್, ಮಸೀದಿ ಸೇರಿದಂತೆ ಇನ್ನೀತರ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಶಾಲಾ-ಕಾಲೇಜುಗಳು, ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್‍ಗಳು ಬಂದ್ ಇರಬೇಕು. ಆದರೆ, ಆನ್‍ಲೈನ್ ಶಿಕ್ಷಣಕ್ಕೆ ಅವಕಾಶವಿದೆ. ನರೇಗಾ ಕಾಮಗಾರಿ ಮತ್ತು ಕಟ್ಟಡ ಕೆಲಸ ಕೂಡ ನಡೆಸಬಾರದು.
ಈ ಎರಡು ದಿನಗಳಂದು ಜಿಲ್ಲೆಯ ಚಿತ್ರಮಂದಿರಗಳು, ಶಾಪಿಂಗ್ ಮಾಲ್ಸ್, ಜಿಮ್ ಕೇಂದ್ರಗಳು, ಸ್ಪೋಟ್ರ್ಸ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕಗಳು, ಥೇಟರ್ಸ್, ಬಾರ್ ಮತ್ತು ಅಡ್ಯುಟೋರಿಯಮ್ಸ್, ಅಸೆಂಬ್ಲಿ ಹಾಲ್‍ಗಳು ಮುಚ್ಚಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾರ್ಯಕ್ರಮಗಳಿಗೆ ನಿಷೇಧ: ಈ ಎರಡು ದಿನಗಳಂದು ಎಲ್ಲಾ ಸಾಮಾಜಿಕ, ರಾಜ್ಯಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕ್ರತಿಕ, ಧಾರ್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕಾರ್ಯಕ್ರಮ ನಿಷೇಧಿಸಿದೆ ಎಂದು ತಿಳಿಸಬೇಕು.
ಯಾವುದಕ್ಕೆ ಅವಕಾಶ: ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು ಸಂಚಾರದ ವೇಳೆಯಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯಗೊಳಿಸಲಾಗಿದೆ. ಹೊಟೆಲ್, ಕ್ಯಾಂಟೀನ್‍ಗಳಲ್ಲಿ ಪಾರ್ಸಲ್ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಪೆಟ್ರೋಲ್ ಬಂಕ್ ಓಪನ್: ಈ ಎರಡು ದಿನಗಳಂದು ಪೆಟ್ರೋಲ್ ಬಂಕ್‍ಗಳು ರಾತ್ರಿ 9 ಗಂಟೆವರೆಗೆ ಮಾತ್ರ ತೆರೆದಿಡಲು ಅವಕಾಶವಿದೆ. ಶನಿವಾರ ಮತ್ತು ಭಾನುವಾರಗಳಂದು ಮದುವೆಗೆ ಅವಕಾಶವಿದ್ದು, 50 ಜನರನ್ನು ಸೇರಿಸಲು ಮಾತ್ರ ಮಿತಿ ಹೇರಲಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ತಮ್ಮಲ್ಲಿರುವ ಗುರುತಿನ ಚೀಟಿಗಳನ್ನು ತೋರಿಸಿ ಕೆಲಸ ನಿರ್ವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.