ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರ

ನವದೆಹಲಿ,ನ.೧೮- ಉದ್ಯೋಗ ಹೊರಗುತ್ತಿಗೆಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ನಾಳೆ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ನಾಳಿನ ಬ್ಯಾಂಕ್ ಮುಷ್ಕರದಲ್ಲಿ ಅಧಿಕಾರಿಗಳ ಮಟ್ಟದ ಸಿಬ್ಬಂದಿ ಭಾಗಿಯಾಗುವುದಿಲ್ಲವಾದರೂ ಎಟಿಎಂ, ನಗದು ವಿತ್‌ಡ್ರಾ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಹಲವು ಸೇವೆಗಳಲ್ಲಿ ತೊಡಕಾಗಲಿದೆ.ನಾಳಿನ ಬ್ಯಾಂಕಿಂಗ್ ಮುಷ್ಕರದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬ್ಯಾಂಕ್‌ಗಳು ಗ್ರಾಹಕರಿಗೆ ಸಂದೇಶ ಕಳಿಸಿ ಬ್ಯಾಂಕಿಂಗ್ ವಹಿವಾಟನ್ನು ವಾರಾಂತ್ಯಕ್ಕೆ ಬಾಕಿ ಇಡದೆ ಇಂದೇ ಶುಕ್ರವಾರ ಬ್ಯಾಂಕಿಂಗ್ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದೆ.ಅನೇಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರ ಖಾಸಗೀತನವನ್ನು ಹಾಗೂ ಹಣವನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ. ಇದನ್ನು ವಿರೋಧಿಸಿ ನಾಳೆ ಮುಷ್ಕರ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಹೆಚ್ ವೆಂಕಟಾಚಲಂ ಹೇಳಿದ್ದಾರೆ.ಕೆನರಾಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಐಡಿಬಿಐ ಬ್ಯಾಂಕುಗಳು ಅನೇಕ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.ಕೆಲವು ಬ್ಯಾಂಕುಗಳ ಆಡಳಿತ ಮಂಡಳಿ ಕೈಗಾರಿಕಾ ವಿವಾದ ಕಾಯ್ದೆಯನ್ನು ಉಲ್ಲಂಘಿಸಿ ಬಲವಂತವಾಗಿ ನೌಕರರನ್ನು ವರ್ಗಾವಣೆ ಮಾಡಿದೆ. ಹಾಗೆಯೇ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ. ಇದನ್ನು ಪ್ರತಿಭಟಿಸಿ ನಾಳಿನ ಬ್ಯಾಂಕ್ ಮುಷ್ಕರ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಕರೆ ನೀಡಿರುವ ಮುಷ್ಕರದ ಬಿಸಿ ಖಾಸಗಿ ಬ್ಯಾಂಕುಗಳಿಗೆ ತಟ್ಟದು, ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕಿಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.