ನಾಳೆ ದೇಶಾದ್ಯಂತ ಕರಾಳ ದಿನ ಆಚರಣೆ: ವೈದ್ಯರ ಕರೆ

ನವದೆಹಲಿ, ಮೇ.31- ಅಲೋಪತಿ ಔಷಧ ಬಗ್ಗೆ ಹಗುರವಾಗಿ ಮಾತನಾಡಿರುವ ಯೋಗಗುರು ಬಾಬಾ ರಾಮದೇವ್ ಹೇಳಿಕೆಯನ್ನು ಖಂಡಿಸಿ ನಾಳೆ ದೇಶಾದ್ಯಂತ ಕರಾಳ ದಿನ ಆಚರಿಸಲು ವೈದ್ಯರ ಸಂಘ ನಿರ್ಧರಿಸಿದೆ.

ಭಾರತೀಯ ವೈದ್ಯಕೀಯ ಸಂಘದ ಆಕ್ಷೇಪಣೆ ಮೇರೆಗೆ ತಮ್ಮ ಹೇಳಿಕೆಯನ್ನು ಬಾಬಾರಾಮದೇವ್ ವಾಪಸ್ ಪಡೆದಿದ್ದರು. ಆದರೂ ರಾಮದೇವ್ ಅವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿರುವ ವೈದ್ಯರ ಸಂಘ ನಾಳೆ ದೇಶಾದ್ಯಂತ ಕರಾಳದಿನ ಆಚರಿಸುವಂತೆ ವೈದ್ಯರಿಗೆ ಸೂಚನೆ ನೀಡಿದೆ.

ಫೆಡರೇಶನ್ ಆಫ್ ರೆಸಿಡೆಂಟ್ ವೈದ್ಯರ ಸಂಘ,-ಎಫ್ ಒ ಆರ್ ಡಿಎ ರಾಮದೇವ್ ಹೇಳಿಕೆಯನ್ನು ಖಂಡಿಸಿ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡುವ ಮೂಲಕ ಭವಿಷ್ಯದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘ ಬಾಬಾ ರಾಮದೇವ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿ ದೇಶದ್ರೋಹದ ಹೇಳಿಕೆ ನೀಡಿರುವ ಬಾಬಾ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ವಿರುದ್ಧ ಒತ್ತಾಯಿಸಿತ್ತು.

ದೇಶದಲ್ಲಿ ಕೊರೋನೋ ಸೋಂಕಿನ ಸಂಕಷ್ಟದ ಸಮಯದಲ್ಲಿ ವೈದ್ಯರ ತಂಡ ಹಗಲಿರುಳು ಜೀವದ ಹಂಗು ತೊರೆದು ಸೋಂಕಿತರ ಪ್ರಾಣ ಉಳಿಸಲು ಶ್ರಮಿಸುತ್ತಿದ್ದಾರೆ ಇಂತಹ ಸಮಯದಲ್ಲಿ ವೈದ್ಯರು ಮತ್ತು ಅಲೋಪತಿ ಹಗುರವಾಗಿ ಮಾತನಾಡುವ ಮೂಲಕ ಅವಮಾನ ಮಾಡಿದ್ದಾರೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಳೆ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡಲಾಗುತ್ತಿದೆ.

ಬಾಬಾ ರಾಮದೇವ್ ಅವರ ಹೇಳಿಕೆಯನ್ನು ವಿರೋಧಿಸಿ ಹದಿನಾಲ್ಕು ಪುಟಗಳ ಸುದೀರ್ಘ ಪತ್ರವನ್ನು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಸರ್ಕಾರಕ್ಕೆ ಬರೆದಿದೆ