ನಾಳೆ ದಶಪಥ ಹೆದ್ದಾರಿ ಮೋದಿಯವರಿಂದ ಚಾಲನೆ: ಪ್ರತಾಪಸಿಂಹ

ಮೈಸೂರು: ಮಾ.11:- ದಶಪಥ ಹೆದ್ದಾರಿಯಾಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 50 ಮೀಟರ್ ಹೆಜ್ಜೆ ಹಾಕುವ ಮೂಲಕ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು.
ನಾಳೆ ಭಾನುವಾರ 11.35ರ ಹೊತ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆರಳಲಿದ್ದಾರೆ. ಮಂಡ್ಯದ ಪಿಇಎಸ್ ಕಾಲೇಜು ಬಳಿ ನಿರ್ಮಿಸಿರುವ ಹೆಲಿಪ್ಯಾಡ್‍ನಲ್ಲಿ ಇಳಿದು ಮೈಸೂರು-ಬೆಂಗಳೂರು ಹಳೇ ರಸ್ತೆಯ ಮೂಲಕ ಗೆಜ್ಜಲಗೆರೆವರೆಗೆ ಸುಮಾರು 2 ಕಿ.ಮೀ.ನಷ್ಟು ರೋಡ್ ಶೋ ನಡೆಸಲಿದ್ದಾರೆ.
ಬಳಿಕ ನೂತನ ಹೆದ್ದಾರಿಯಲ್ಲಿ 50 ಮೀಟರ್ ನಡೆಯುವ ಮೂಲಕ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಗೆಜ್ಜಲಗೆರೆ ಬಳಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 1.5 ಲಕ್ಷ ಜನರು ಸೇರಲಿದ್ದು, ಮೈಸೂರಿನಿಂದ 25 ರಿಂದ 30 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಶ್ರೀರಂಗಪಟ್ಟಣದಿಂದ ಮಂಡ್ಯಕ್ಕೆ 135 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಉದ್ಘಾಟಿಸಲಿದ್ದಾರೆ. ಜತೆಗೆ ಮೈಸೂರು-ಕುಶಾಲನಗರ ಚತುಷ್ಪಥ ಯೋಜನೆಗೂ ಭೂಮಿಪೂಜೆ ಮಾಡಲಿದ್ದಾರೆ ಎಂದು ತಿಳಿಸಿದರು.