ನಾಳೆ ತಂಬ್ರಹಳ್ಳಿ ಯಲ್ಲಿ  ಬಯಲಾಟ ಕುಣಿತ ಸ್ಪರ್ಧೆ

,
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಡಿ.23 ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ  ನಾಳೆ ದಿ.24 ರಂದು ಭಾನುವಾರ ತಾಲೂಕು ಮಟ್ಟದ ಸ್ತ್ರೀ ಮತ್ತು ಪುರುಷ ಬಯಲಾಟ ಕುಣಿತ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಏಕೀಕರಣ ಟ್ರಸ್ಟ್ ನ ಅಧ್ಯಕ್ಷೆ ಡಾ.ಸುಜಾತ ಅಕ್ಕಿ ತಿಳಿಸಿದರು.
ತಂಬ್ರಹಳ್ಳಿಯಲ್ಲಿ ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕರ್ನಾಟಕ ನಾಮಕರಣ 50ನೇ ವರ್ಷದ ಸಂಭ್ರಮೋತ್ಸವದ ನಿಮಿತ್ಯ ಏಕೀಕರಣ ಟ್ರಸ್ಟ್ ಹಾಗೂ ಬಯಲ ಬೆಳಗು ಬಯಲಾಟ ಪ್ರಾಯೋಗಿಕ ಅಧ್ಯಯನ ಕೇಂದ್ರ ತಂಬ್ರಹಳ್ಳಿ ಇವರ ಸಹಯೋಗದೊಂದಿಗೆ ಬಯಲಾಟ ಕುರಿತಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಬಯಲಾಟಕಲೆಯು ಸಮಕಾಲೀನಗೊಳ್ಳುವ  ಮತ್ತುಅಧ್ಯಯನ ಶಿಸ್ತಿಗೆ ಒಳಪಡಿಸುವ ಹೊಸ ಹೊಸ ಕಥಾವಸ್ತುವನ್ನು ಬಯಲಾಟದಲ್ಲಿ ಪ್ರದರ್ಶನವನ್ನು ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.24ರ ಭಾನುವಾರ ಬೆಳಿಗ್ಗೆ 10-30 ಕ್ಕೆ “ಪ್ರಸ್ತುತ ಸಂದರ್ಭದಲ್ಲಿ ಬಯಲಾಟ ಕಲೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಹಾವೇರಿಯ ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಹೆಚ್ ಉಮೇಶಪ್ಪ ಉದ್ಘಾಟನೆ ನೆರವೇರಿಸುವರು. ಹಿರಿಯ ಸಾಹಿತಿ ಬಾಚಿಗೊಂಡನಹಳ್ಳಿಯ ಹುರುಕಡ್ಲಿ ಶಿವಕುಮಾರ್ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ದೇವಗಿರಿಯ ಪ್ರಾಚಾರ್ಯ ಜಿಪಿ ಪೂಜಾರ್, ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಮುಖ್ಯ ಅಧಿಕಾರಿ ಕೊಳ್ಳಿ ಬಸವರಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದು ಸ್ತ್ರೀ ಮತ್ತು ಪುರುಷ ಕುಣಿತ ಸ್ಪರ್ಧೆ ತಂಬ್ರಹಳ್ಳಿಯ ಹಿರಿಯ ಬಯಲಾಟ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಹಾಗೂ
 ಸಂಜೆ 6 ಗಂಟೆಗೆ ಬಯಲು ರಂಗಮಂದಿರದಲ್ಲಿ ಚಾಮಲಾದೇವಿ ಬಯಲಾಟ ಪ್ರದರ್ಶನ ಏರ್ಪಡಿಸಲಾಗಿದೆ, ಸುತ್ತಮುತ್ತಲಿನ ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.