ನಾಳೆ ಜೆಡಿಎಸ್ ೨ನೇ ಪಟ್ಟಿ ಬಿಡುಗಡೆ

ಕಲಬುರಗಿ,ಏ.೧೩-ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಾಳೆ ಪ್ರಕಟ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ನಾಳೆ ಜೆಡಿಎಸ್ ಅಭ್ಯರ್ಥಿಗಳ ೨ನೇ ಪ್ರಕಟಿಸಲಾಗುವುದು. ಎರಡು ದಿನದೊಳಗೆ ಗೊಂದಲ ಬಗೆಹರಿಯಲಿದೆ. ಹಾಸನ ಜೆಡಿಎಸ್ ಟಿಕೆಟ್ ಕೂಡ ಫೈನಲ್ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ನಾಳೆ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕರ ಹಾಗೂ ಮುಖಂಡರ ದಂಡೇ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗುತ್ತದೆ. ಉತ್ತರ ಕರ್ನಾಟಕದ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ-ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಸೇರ್ಪಡೆ ಭರಾಟೆ ನೋಡಿದರೆ ಉತ್ತರ ಕರ್ನಾಟಕದಿಂದಲೇ ೪೦ಕ್ಕೂ ಅಧಿಕ ಸ್ಥಾನಗಳು ಪಕ್ಷಕ್ಕೆ ಬರಲಿವೆ. ಹೀಗಾಗಿ ಸರಳವಾಗಿ ೧೨೩ ಸ್ಥಾನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನಿಸುತ್ತಿದೆ. ನಿರೀಕ್ಷೆ ಮೀರಿ ಮಾಜಿ ಶಾಸಕರು, ಮುಖಂಡರು ಸೇರುತ್ತಿದ್ದು, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಹಲವರು ಪಕ್ಷಕ್ಕೆ ಸೇರುತ್ತಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸೇರ್ಪಡೆ ಸಮಾವೇಶ ನಡೆಯಲಿದೆ. ಜೆಡಿಎಸ್ ಪಕ್ಷದ ಅಂತೀಮ ಪಟ್ಟಿಯನ್ನು ಸಹ ಏ. ೧೪ ರ ಸಂಜೆಯೇ ಬಿಡುಗಡೆಗೊಳಿಸಲಾಗುವುದು. ಪಕ್ಷಕ್ಕೆ ಸೇರ್ಪಡೆಯಾದವರ ಹೆಸರುಗಳನ್ನು ಸೇರಿಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಸೇರ್ಪಡೆ ವಿಷಯ ಎಚ್.ಡಿ.ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ಜನತಾ ಪರಿವಾರ ಬಿಟ್ಟು ಹೋದವರೆಲ್ಲ ಮರಳಿ ಜೆಡಿಎಸ್‌ಗೆ ಬರುತ್ತಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಕೆಳಗಡೆ ಕೆಲಸ ಮಾಡಲು ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಆದರೆ ೨೦೧೮ರಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದರು. ಅದನ್ನು ಆಗಲೇ ಜಾರಿ ತರಬೇಕಿತ್ತು. ಈಗ ತೋರಿಕೆಗೆ ಹೇಳಲಾಗುತ್ತಿದೆ ಎಂದು ತಿರುಗೇಟು ನೀಡಿದರು.