ನಾಳೆ ಜಿಲ್ಲಾ ಕಸಾಪ ಚುನಾವಣೆ: ಕನ್ನಡ ತೇರು ಎಳೆಯಲು ಬಿರುಸಿನ ಪೈಪೆÇೀಟಿ ನಡೆಸಿದ ಮೂವರು ಯುವಕರು

ಬೀದರ:ನ.20: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ. ಸ್ಪರ್ಧಾ ಕಣದಲ್ಲಿರುವ ನಾಲ್ವರ ಪೈಕಿ ಒಬ್ಬರು ಮಾತ್ರ ಹಿರಿಯರಿದ್ದು, ಮೂವರು ಯುವಕರೇ ಇದ್ದಾರೆ.

ಸಂಘಟನೆ, ಸಾಹಿತ್ಯ ಹಾಗೂ ಸಂಸ್ಕøತಿಯ ವಲಯದಲ್ಲಿ ಕೈಗೊಂಡಿರುವ ಕಾರ್ಯಗಳು ಹಾಗೂ ಸಾಧನೆಯನ್ನು ಪ್ರಸ್ತಾಪಿಸಿ ಸದಸ್ಯರಲ್ಲಿ ಮತ ಯಾಚಿಸುತ್ತಿದ್ದಾರೆ.

ಹೊಸಬರಿಗೆ ಅವಕಾಶ ಕಲ್ಪಿಸಿ’
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಾಜಕುಮಾರ ಹೆಬ್ಬಾಳೆ ಕನ್ನಡ ಸಂಘ ಕಟ್ಟಿಕೊಂಡು ಕನ್ನಡದ ಜಾಗೃತಿ ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಕೇಂದ್ರ ಸರ್ಕಾರದ ಸಾಂಸ್ಕೃತಿಕ, ಸಂಪನ್ಮೂಲ ತರಬೇತಿ ಕೇಂದ್ರದ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ತಾವು ಮಾಡಿರುವ ಕೆಲಸಗಳು ಕೈಹಿಡಿಯಲಿವೆ ಎಂಬ ವಿಶ್ವಾಸದಿಂದ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದಾರೆ.

‘ಒಂದು ಬಾರಿ ಅಧ್ಯಕ್ಷರಾದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಮತದಾರರು ಸಹ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಚುನಾವಣೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದು ರಾಜಕುಮಾರ ಹೆಬ್ಬಾಳೆ ಹೇಳುತ್ತಾರೆ.

ಬೀದರ್‍ನ ಚಿಕ್ಕಪೇಟೆ ಬಳಿಯ ಸಾಂಸ್ಕೃತಿಕ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಆಯ್ಕೆಯಾದರೆ ಅದನ್ನು ಪೂರ್ಣಗೊಳಿಸಲು ಆದ್ಯತೆ ನೀಡುವೆ’ ಎಂದರು.

ಕನ್ನಡದ ಕಾರ್ಯಕ್ರಮಗಳಿಗಾಗಿ ದತ್ತಿ ಸ್ಥಾಪನೆ, ಕೃತಿ ಪ್ರಕಟಣೆಗೆ ಪೆÇ್ರೀತ್ಸಾಹ, ಕೇಂದ್ರ ಸಂಗೀತ, ನಾಟಕ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜನೆ, ರಾಷ್ಟ್ರೀಯ ಉತ್ಸವ ಆಯೋಜನೆ, ಅಂತರರಾಷ್ಟ್ರೀಯ ಜಾನಪದ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ ಹಾಗೂ ರಾಷ್ಟ್ರೀಯ ಪುಸ್ತಕ ಮೇಳ ಆಯೋಜಿಸುವ ಧ್ಯೇಯ ನನ್ನದಾಗಿದೆ ಎಂದು ತಿಳಿಸಿದರು.

ಇನ್ನೊಂದು ಅವಧಿಗೆ ಅವಕಾಶ ಕೊಡಿ: ಚನಶೆಟ್ಟಿ
ಕಾಲೇಜು ದಿನಗಳಲ್ಲೇ ಕನ್ನಡಾಂಬೆ ಗೆಳೆಯರ ಬಳಗ ಹುಟ್ಟು ಹಾಕಿ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡ ಸುರೇಶ ಚನಶೆಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಒಂದು ಅವಧಿ ಪೂರ್ಣಗೊಳಿಸಿದ್ದಾರೆ. ಮತ್ತೊಮ್ಮೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಸಾಹಿತಿಗಳು ಹಾಗೂ ಯುವಕರ ಪಡೆಕಟ್ಟಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರದ ಸಂದರ್ಭದಲ್ಲೇ ‘ಪ್ರಜಾವಾಣಿ’ಯೊಂದಿಗೆ ಮನಬಿಚ್ಚಿ ಮಾತನಾಡಿದರು.

‘ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವತಂತ್ರ ವೆಬ್‍ಸೈಟ್ ಆರಂಭಿಸಲಾಗಿದೆ. ಸಾಂಸ್ಕೃತಿಕ ಚಿಂತಕರ 30 ಕೃತಿಗಳನ್ನು ಪ್ರಕಟಿಸಲಾಗಿದೆ. ಅಖಿಲ ಭಾರತ ಕವಯತ್ರಿಯರ ಸಮ್ಮೇಳನ, ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ನಾಲ್ಕು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, 19 ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿ ಸಾಹಿತ್ಯ ಸಮ್ಮೇಳನ, ಎರಡು ಯುವ ಸಮ್ಮೇಳನ, ಎರಡು ವಲಯ ಸಮ್ಮೇಳನ, ಕೃಷಿ ಸಹಕಾರ ಸಮ್ಮೇಳನ, ಹಳೆಗನ್ನಡ ಪಠ್ಯದ ಓದು ಕಾರ್ಯಾಗಾರ, 50 ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ, ಸರಣಿ ಉಪನ್ಯಾಸ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದ ಹೆಮ್ಮೆ ನನಗಿದೆ’ ಎಂದು ಹೇಳಿದರು.

‘ನನ್ನ ಸಂಘಟನಾ ಶಕ್ತಿ, ಸೇವೆ, ಹಾಗೂ ಅನುಭವಗಳನ್ನು ಪರಿಗಣಿಸಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ಸಾಹಿತ್ಯ ಸೇವೆಗಾಗಿ ಬೆಂಬಲಿಸಿ’
ಸಾಹಿತಿ, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಸಂಜೀವಕುಮಾರ ಅತಿವಾಳೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡದ ಸೇವೆ ಮಾಡಲು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಎರಡು ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅವರು ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಆತ್ಮವಿಶ್ವಾಸದೊಂದಿಗೆ ಮತ್ತೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಗೌರವ ಅಧ್ಯಕ್ಷರಾಗಿ ರಾಜ್ಯಮಟ್ಟದ ಎರಡು ಕಾವ್ಯ ಕಮ್ಮಟಗಳನ್ನು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ವಿಚಾರ ಸಂಕಿರಣ ಆಯೋಜಿಸಿ ಉದಯೋನ್ಮುಖ ಕವಿ ಹಾಗೂ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜುಗಳಲ್ಲಿ ಬೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶಿಕ್ಷಣ ಕ್ಷೇತ್ರದ ಒಬ್ಬರು ಅಧ್ಯಕ್ಷರಾಗಬೇಕು ಎನ್ನುವುದು ಅವರೆಲ್ಲರ ಇಚ್ಛೆಯಾಗಿದೆ. ಅವರ ಪ್ರೇರಣೆಯಿಂದಾಗಿ ಸ್ಪರ್ಧಾ ಕಣಕ್ಕೆ ಇಳಿದಿದ್ದೇನೆ ಎನ್ನುತ್ತಾರೆ ಸಂಜೀವಕುಮಾರ ಅತಿವಾಳೆ.

ಸಾಹಿತಿ ಹಾಗೂ ಶಿಕ್ಷಕನಾಗಿರುವುದರಿಂದ ಪರಿಷತ್ತಿನಲ್ಲಿ ಶುದ್ಧ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇನೆ. ಪರಿಷತ್ತು ರಾಜಕೀಯ ರಹಿತವಾಗಿರಬೇಕು. ಗುಂಪುಗಾರಿಕೆ ನಿರ್ಮೂಲನೆ ಮಾಡುವುದು, ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿ ಕೊಂಡವರಿಗೆ ಪರಿಷತ್ತಿನ ಮೂಲಕ ನ್ಯಾಯ ದೊರಕಿಸಿಕೊಡುವುದು, ಎಲ್ಲ ಸಮುದಾಯದವರಿಗೂ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಿಕೊಡುವುದು ಹಾಗೂ ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸುವುದು ನನ್ನ ಧ್ಯೇಯವಾಗಿದೆ ಎಂದು ಹೇಳುತ್ತಾರೆ.

ಶಿಕ್ಷಕರಾಗಿರುವ ಸಿದ್ದಲಿಂಗಯ್ಯ ಭಂಕಲಗಿ ಅವರು ಕನ್ನಡತಾಯಿ ಭುವನೇಶ್ವರಿ ಸೇವೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.