ನಾಳೆ ಜಗ್ಗಲಗಿ ಹಬ್ಬ

ಹುಬ್ಬಳ್ಳಿ,ಮಾ8: ಹೋಳಿ ಹಬ್ಬದ ಅಂಗವಾಗಿ ಹುಬ್ಬಳ್ಳಿ ಜಗ್ಗಲಗಿ ಹಬ್ಬವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ನಗರದ ಮೂರುಸಾವಿರಮಠದ ಆವರಣದಿಂದ ಆಯೋಜನೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಆಯೋಜಕರು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಮೂರುಸಾವಿರಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಮೂರುಸಾವಿರಮಠದ ಶ್ರೀ ಜಗದ್ಗುರು ಗುರುಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು ಸೇರಿದಂತೆ ರಾಜ್ಯದ 20 ಕ್ಕೂ ಹೆಚ್ಚು ಮಠಾಧೀಶರು ವಹಿಸಲಿದ್ದಾರೆ ಎಂದರು.
ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಭವ್ಯ ಮೆರವಣಿಗೆಯು ನೂರಾರು ಜಗ್ಗಲಗಿ ಮತ್ತು ವಿವಿಧ ಚರ್ಮವಾದ್ಯಗಳೊಂದಿಗೆ, ಜಾನಪದ ಕಲಾವಿದರ ಸಾರಥ್ಯದಲ್ಲಿ ಮೂರುಸಾವಿರಮಠದ ಮೈದಾನದಿಂದ ಪ್ರಾರಂಭಗೊಂಡು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬಾನಿ ಓಣಿ-ಶಕ್ತಿ ರಸ್ತೆ, ಮರಾಠಾ ಗಲ್ಲಿ, ಬ್ರಾಡ್ ವೇ, ದುರ್ಗದಬೈಲ್ ವೃತ್ತ, ಬೆಳಗಾಂವ ಗಲ್ಲಿ, ಪೆಂಡಾರ್ ಗಲ್ಲಿ, ಶ್ರೀ ತುಳಜಾಭವಾನಿ ವೃತ್ತ, ದಾಜೀಬಾನಪೇಟ ಮಾರ್ಗವಾಗಿ ಮೂರುಸಾವಿರಮಠದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಅವರೊಟ್ಟಿಗೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಂಗರಾಜ ಪಾಟೀಲ್, ಸುಭಾಷ್ ಸಿಂಗ್ ಜಮಾದಾರ ಉಪಸ್ಥಿತರಿದ್ದರು.