
(ಸಂಜೆವಾಣಿ ಪ್ರತಿನಿಧಿಯಿಂದ)
ಮೈಸೂರು,ಆ.೨೯:ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಮಕ್ಕಳ ಮತ್ತು ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇವರುಗಳು ಭಾಗಿಯಾಗಲಿದ್ದು, ಸಾಂಕೇತಿಕವಾಗಿ ಫಲಾನುಭವಿಗಳಿಗೆ ೨ ಸಾವಿರ ರೂ. ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.’ನಾಳಿನ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಿಳೆ ಮತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳೆದ ಮೂರು ದಿನಗಳಿಂದಲೇ ಮೈಸೂರಿನಲ್ಲಿ ಮೊಕ್ಕಾಂ ಹೂಡಿ ಕಾರ್ಯಕ್ರಮದ ಉಸ್ತುವಾರಿ ನಡೆಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ಬೆಂಗಳೂರಿನಿಂದ ಮೈಸೂರಿಗೆ ತೆರಳುವರು.ನಾಳಿನ ಕಾರ್ಯಕ್ರಮದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗಲಿದ್ದು, ಸಾರ್ವಜನಿಕರೂ ಸಹ ದೊಡ್ಡ ಸಂಖ್ಯೆಯಲ್ಲಿ ಸೇರುವ ನಿರೀಕ್ಷ ಇದೆ.ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಕುಡಿಯುವ ನೀರು, ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿ ಜಿಲ್ಲೆಯಿಂದಲೂ ಕಾರ್ಯಕರ್ತರನ್ನು ಕರೆತರಲು ಬಸ್‌ಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಕಾರ್ಯಕ್ರಮ ನಡೆಯುವ ಮಹಾರಾಜ ಕಾಲೇಜು ಮೈದಾನದಲ್ಲೂ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು ೧ ಲಕ್ಷ ಜನ ಕೂರುವಷ್ಟು ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.
ಏಕಕಾಲದಲ್ಲಿ ಚಾಲನೆ
ಮೈಸೂರಿನಲ್ಲಿ ಯೊಜನೆಯ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಇದರ ಜತೆ ಜತೆಗೆ ಎಲ್ಲ ಜಿಲ್ಲಾಕೇಂದ್ರಗಳು ಹಾಗೂ ಪಂಚಾಯತಿಗಳಲ್ಲು ಕಾರ್ಯಕ್ರಮ ಉದ್ಘಾಟನೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಪ್ರಮುಖ ಕಾರ್ಯಕ್ರಮವನ್ನು ಮೊದಲು ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತಾದರೂ ನಂತರ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರ ಮಾಡಲಾಯಿತು