ನಾಳೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿರುವ ಬಿಪರ್ ಜಾಯ್

ರೆಡ್ ಅಲರ್ಟ್ ಘೋಷಣೆ
ರಾಜ್‌ಕೋಟ್/ ನವದೆಹಲಿ,ಜೂ.೧೪- ಬಿಪರ್ ಜಾಯ್ ಚಂಡಮಾರುತರ ನಾಳೆ ಸಂಜೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ೩೦ ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದು, ಗುಜರಾತ್ ನ ಕಚ್ ಮತ್ತು ಸೌರಾಷ್ಡ್ರ ಕರಾವಳಿ ತೀರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆ ಮಾಹಿತಿ ಅನುಸಾರ ಕಚ್, ದೇವಭೂಮಿ, ದ್ವಾರಕ, ಜಾಮ್ ನಗರ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಬೀರುವ ಭೀತಿ ಎದುರಾಗಿದೆ. ಕಚ್ ಜಿಲ್ಲೆಯ ಕರಾವಳಿಯಿಂದ ೫ ಕಿ.ಮೀ ದೂರವಿರುವ ಆಶೀರ್ವಾಡ ಗ್ರಾಮದಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸಿ ಸ್ಥಳಾಂತರ ಮಾಡಿದ್ದಾರೆ.
ಇದುವರೆಗೂ ಚಂಡಮಾರುತದ ಗುಜರಾತ್ ವಿವಿಧ ಭಾಗದಲ್ಲಿ ಸತ್ತವರ ಸಂಖ್ಯೆ ೫ಕ್ಕೆ ಏರಿಕೆಯಾಗಿದೆ. ಚಂಡಮಾರುತ ಕರಾವಳಿ ತೀರಕ್ಕೆ ನಾಳೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಗುಜರಾತ್ ನ ಜಖೌ ಬಂದರಿನ ಬಳಿ ಭೂಕುಸಿತವಾಗುವ ಹಿನ್ನೆಲೆಯೆಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ೩೦ ಸಾವಿರ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಜರಾತ್‌ನ ಕರಾವಳಿ ಜಿಲ್ಲೆಗಳಾದ ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಅನೇಕ ಸರ್ಕಾರದ ವಿವಿದ ಸಂಸ್ಥೆಗಳು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ ಆಶ್ರಯ ತಾಣಗಳಲ್ಲಿ ನೆಲೆ ಕಲ್ಪಿಸಿದ್ದಾರೆ.ನಿನ್ನೆ ಮೂರು ಮಂದಿ ಚಂಡಮಾರುತದಿಂದ ಸಾವನ್ನಪ್ಪಿದ್ದರು. ಇದೀಗ ರಾಜ್ಯದಲ್ಲಿ ಇನ್ನೂ ಎರಡು ಸಾವುಗಳು ವರದಿಯಾಗಿವೆ, ಬಿಪರ್‍ಜಾಯ್‌ನ ಭೂಕುಸಿತದ ಮೊದಲು ಬಿರುಗಾಳಿಯ ಹವಾಮಾನದಿಂದಾಗಿ ಸಾವುನೋವು ಸಂಭವಿಸಿವೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಈಶಾನ್ಯ ಅರೇಬಿಯನ್ ಸಮುದ್ರದ ಮೇಲೆ “ಅತ್ಯಂತ ತೀವ್ರವಾದ ಚಂಡಮಾರುತ” ದಿಂದ “ಅತ್ಯಂತ ತೀವ್ರ ಚಂಡಮಾರುತ” ಕ್ಕೆ ದುರ್ಬಲಗೊಂಡಿದೆ. ರಾಜ್ಯ ಪ್ರವೇಶಿಸುವಾಗ “ವಿಸ್ತೃತ ಹಾನಿಯ ಸಂಭಾವ್ಯತೆ” ಹೊಂದಿದೆ ಎನ್ನಲಾಗಿದೆ.
ಚಂಡಮಾರುತ ಕಚ್, ದೇವಭೂಮಿ ದ್ವಾರಕಾ, ಜಾಮ್‌ನಗರ್ ಮತ್ತು ಪೊರಬಂದರ್‍ನ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಂತ ಭಾರೀ ಮಳೆಗೆ ಕಾರಣವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಪೊರಬಂದರ್‍ನಲ್ಲಿ ಕುಸಿದುಬಿದ್ದ ಶಿಥಿಲಗೊಂಡ ಕಟ್ಟಡದ ಕೆಳಗೆ ನಜ್ಜುಗುಜ್ಜಾಗಿ ನರನ್ ಲೋಧರ್ ಎಂದು ಗುರುತಿಸಲಾದ ೩೫ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಪರಿಸ್ಥಿತಿ ಪರಿಗಣಿಸಿ, ೫ ರಿಂದ ೧೦ ಕಿಮೀ ವ್ಯಾಪ್ತಿಯ ಸಮುದ್ರ ತೀರದಲ್ಲಿ ವಾಸಿಸುವ ೭,೨೭೮ ಜನರನ್ನು ಸ್ಥಳಾಂತರಿಸಲಾಗುವುದು ಎಂದು ಕಚ್ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಏಳು ತಾಲೂಕುಗಳ ೧೨೦ ಗ್ರಾಮಗಳಲ್ಲಿ ಜೂನ್ ೧೨ರಂದು ತೆರವು ಕಾರ್ಯ ಆರಂಭವಾಗಿದೆ ಎಂದಿದ್ದಾರೆ.
ಮತ್ತೊಂದೆಡೆ ಕರಾವಳಿ ಭಾಗದ ಗ್ರಾಮಗಳಿಂದ ನೂರಾರು ಜನರ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಬಹುತೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಸಾಮಾನುಗಳನ್ನು ತೊರೆಯಲು ಹಿಂಜರಿಯುತ್ತಿದ್ದಾರೆ. ಇದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ.
ಕರಾವಳಿಯಲ್ಲಿ ಭಾರೀ ಮಳೆ
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜೂ.೧೮ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ, ತುಮಕೂರಿನಲ್ಲಿ ಭಾರೀ ಮಳೆ ಬೀಳಲಿದೆ ಎಂದು ತಿಳಿಸಿದೆ.