ನಾಳೆ ಕೊಪ್ಪಳದಲ್ಲಿ ಕೆಆರ್ ಎಸ್ ಪಕ್ಷದ ರಾಜ್ಯ ಮಟ್ಟದ ಯುವ ಸಮಾವೇಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.11: ದೇಶದ ಅಭಿವೃದಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಲು ಯುವಜನರನ್ನು ಒಳಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮಗ್ರ ಯುವ ನೀತಿಯ ಅಗತ್ಯವಿದ್ದು ಮತ್ತು ಅವರ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಆಗ್ರಹಿಸಿ. ಸ್ವಾಮಿ ವಿವೇಕಾನಂದರವರ ಜನ್ಮ ದಿನದ ಅಂಗವಾಗಿ ನಾಳೆ ಕೊಪ್ಪಳದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಜ್ಯಮಟ್ಟದ ಯುವ ಸಮಾವೇಶ ಆಯೋಜಿಸಿದೆ.
ಪಕ್ಷದ ಯುವ ಘಟಕದ ಪ್ರಧಾನ‌ ಕಾರ್ಯದರ್ಶಿ ಪ್ರಶಾಂತ ರೆಡ್ಡಿ ಇಂದು ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ‌ ನೀಡಿದರು.
ಯುವಜನತೆ ಈ ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ಪ್ರಜ್ಞಾವಂತ ನಾಡನ್ನು ಕಟ್ಟಲು ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜೊತೆ ಕೈಗೂಡಿಸ ಬೇಕೆಂದು ಕೋರಿದರು.
ಭ್ರಷ್ಟಾಚಾರ ವ್ಯವಸ್ಥೆಯನ್ನು ಹೋಗಲಾಡಿಸುವ ಅಮೋಘವಾದ ಶಕ್ತಿ ಯುವ ಜನರಲ್ಲಿದೆ‌. ದೇಶದಲ್ಲಿ ಯುವ ಜನತೆಯ ಜನಸಂಖ್ಯೆ ಶೇಕಡ 50 ಕ್ಕಿಂತ ಹೆಚ್ಚಿದ್ದು‌  ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ಈ ಸಮೂಹದ ಸದ್ಬಳಕೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ನಮ್ಮಲ್ಲಿನ ಹಲವಾರು ಸಮಸ್ಯೆಗಳಿಂದ ಯುವಜನರ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಶಕ್ತಿ ವ್ಯರ್ಥವಾಗುತ್ತಿದೆ. ದೇಶದಲ್ಲಿ ಯುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ಸೂಕ್ತ ಶಿಕ್ಷಣ, ಉದ್ಯೋಗ, ಉದ್ಯೋಗ ಪಡೆಯಲು ಕೌಶಲ್ಯಗಳ ಕೊರತೆ ಹೆಚ್ಚಾಗಿ ಬಾಧಿಸುತ್ತಿದೆ. ಒಂದೆಡೆ ಸೂಕ್ತ ಕೌಶಲ್ಯವುಳ್ಳ ಜನರು ಸಿಗುತ್ತಿಲ್ಲವೆಂದು ಉದ್ಯಮಿಗಳು ಹೇಳುತ್ತಿದ್ದಾರೆ ಆದರೆ ಲಕ್ಷಾಂತರ ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಸರ್ಕಾರಗಳು ಹೇಳುತ್ತಿವೆ. ಇದು  ಕೇವಲ ಸರ್ಕಾರಿ ದಾಖಲೆಗಳಲ್ಲಿ ಮಾತ್ರವೇ ಹೊರತು, ಯುವ ಜನರನ್ನು ತಲುಪಿಲ್ಲ. ಜೀವನ ಭದ್ರತೆಯೇ ಇಲ್ಲದೆ, ಗುತ್ತಿಗೆ ನೌಕರಿಯಲ್ಲಿ ಜೀವನ ಪರ್ಯಂತ ದುಡಿಯುವ ಪರಿಸ್ಥಿತಿಯಲ್ಲಿದ್ದಾರೆಂದರು.
ಯುವ ಜನರು ಡ್ರಗ್ಸ್, ಬೆಟ್ಟಿಂಗ್, ಕುಡಿತ, ಆನ್ಲೈನ್ ಗೇಮ್ಸ್ ವ್ಯಸನಗಳಿಗೆ ದಾಸರಾಗುತ್ತಿದ್ದು, ಇವನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸರ್ಕಾರವೆ ಮುಂದೆ ನಿಂತು ಇಂತಹ ವ್ಯಸನಗಳಿಗೆ ದಾಸರನ್ನಾಗಿ ಮಾಡುವ ದಾರಿಗಳನ್ನು ತೆರೆಯುತ್ತಿದೆಂದು ಆರೋಪಿಸಿದರು.
ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳು ಹಳಿ ತಪ್ಪಿವೆ, ಯುವಕರನ್ನು ಅನವಶ್ಯಕ ವಿಚಾರಗಳಿಗಾಗಿ ದಾರಿ ತಪ್ಪಿಸಲಾಗುತ್ತದೆ.
ಇಂತಹ ಸಮಯದಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದಲ್ಲಿ ಯುವ ಜನರಿಗೆ ಆದ್ಯತೆ ಇದೆ.  ನಿರಂತರವಾಗಿ ಆಡಳಿತದಲ್ಲಿನ ಅಕ್ರಮಗಳ ವಿರುದ್ಧ ಹೋರಾಡುತ್ತಿದೆಂದರು.
ಪಕ್ಷದ ಪದಾಧಿಕಾರಿಗಳಾದ  ಡಾ.ಕೆ.ಎಸ್. ಮಂಜುನಾಥ, ಪ್ರಶಾಂತ್ ರೆಡ್ಡಿ, ವಿಜಯ್ ಕುಮಾರ್ ಜಿ.ಎಸ್, ಕೊರ್ಲಗುಂದಿ ಪ್ರಕಾಶ್ ರೆಡ್ಡಿ, ಅಸುಂಡಿ ಮೋಹನ್ ಮೊದಲಾದವರು  ಉಪಸ್ಥಿತರಿದ್ದರು

One attachment • Scanned by Gmail