ನಾಳೆ ಕೆಪಿಟಿಸಿಎಲ್ ನೌಕರರ ಮುಷ್ಕರ

ರಾಯಚೂರು,ಮಾ.೧೫- ವೇತನ ಹೆಚ್ಚುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೆಪಿಟಿಸಿಎಲ್ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ ಗಡುವು ಅಂತ್ಯವಾಗಿದ್ದರಿಂದ ಮಾರ್ಚ್ ೧೬ ರಂದು ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಜೆ.ಎಲ್.ಗೋಪಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಸ್ಕಾರಣೆ ಆಗಬೇಕಿತ್ತು. ಆದರೆ ಅದು ಆಗಿಲ್ಲ, ಹೀಗಾಗಿ ಈ ಕೂಡಲೇ ವೇತನ ಪರಿಸ್ಕಾರಣೆ ಮಾಡಬೇಕು. ಸರ್ಕಾರಿ ನೌಕರರಿಗೆ ಮಧ್ಯಾಂತರ ಶೇಕಡ ೧೭ರಷ್ಟು ವೇತನ ಪರಿಷ್ಕರಣೆ ಮಾಡಿದ್ದಾರೆ. ಆದರೆ ನಮಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರು ಮತ್ತು ಅಧಿಕಾರಿಗಳ ವೇತನ ಬೇಡಿಕೆ ಪರಿಷ್ಕರಣೆವಾಗಬೇಕು.೦೧-೦೪-೨೦೨೨ ರಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು ಎಂದ ಅವರು ಎಲ್ಲ ನೌಕರರು ನಾಳೆ ಮುಷ್ಕರಕ್ಕೆ ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.