ನಾಳೆ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ

ತುಮಕೂರು, ಆ. ೬- ಶ್ರೀ ಮಾರುತಿ ಕಲಾ ಬಳಗ (ರಿ) ಯಲ್ಲಾಪುರ, ತುಮಕೂರು ವತಿಯಿಂದ ಆಗಸ್ಟ್ ೭ ರಂದು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ವೃತ್ತಿ ನಿರತ ಕಲಾವಿದರಿಂದ ಬಿ. ಪುಟ್ಟಸ್ವಾಮಯ್ಯ ಅವರ ಕುರುಕ್ಷೇತ್ರ ನಾಟಕವನ್ನು ವಿಶಿಷ್ಟ ಮತ್ತು ವಿಭಿನ್ನವಾಗಿ ರಂಗದ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ರಂಗನಿರ್ದೇಶಕ ಶ್ರೀನಿವಾಸಮೂರ್ತಿ ನೀನಾಸಂ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ. ಪುಟ್ಟಸ್ವಾಮಯ್ಯ ವಿರಚಿತ ಕುರುಕ್ಷೇತ್ರ ನಾಟಕ ನಾಡಿನ ಹೆಸರಾಂತ ಗುಬ್ಬಿ ಕಂಪೆನಿಯ ಮಹೋನ್ನತ ನಾಟಕಗಳಲ್ಲಿ ಒಂದು. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕದ ಆಶಯಗಳಿಗೆ ಬದಲಾಗಿ, ಅಬ್ಬರದ ಸಂಗೀತ, ವೇಷ ಭೂಷಣಕ್ಕೆ ಹೆಚ್ಚು ಒತ್ತು ನೀಡಿ, ನಾಟಕದ ನಿಜವಾದ ತಿರುಳನ್ನು ಪ್ರೇಕ್ಷಕರ ಮುಂದಿಡುವಲ್ಲಿ ವಿಫಲರಾಗುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೀನಾಸಂ ಮತ್ತಿತರರ ಕಡೆಗಳಲ್ಲಿ ರಂಗ ತರಬೇತಿ ಪಡೆದಿರುವ ಕಲಾವಿದರ ಜತೆಗೆ, ವೃತ್ತಿ ನಿರತ ಕಲಾವಿದರು ಸೇರಿ ಸಂಪೂರ್ಣ ನಾಟಕವನ್ನು ಯಾವುದೇ ಲೋಪವಿಲ್ಲದೆ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಇದಾಗಿದೆ ಎಂದರು.
ಯುವ ಕಲಾವಿದ ಶ್ರೀನಿವಾಸಮೂರ್ತಿ ನೀನಾಸಂ ಅವರ ರಂಗ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಮಹಾಭಾರತದ ಕುರುಕ್ಷೇತ್ರ ಪರ್ವವನ್ನು ಕಲಾರಸಿಕರ ಮುಂದಿಡುವ ಪ್ರಯತ್ನ ಇದಾಗಿದೆ. ಇಲ್ಲಿ ನಾಟಕದ ಪ್ರಮುಖ ಪಾತ್ರಗಳಾದ ಶ್ರೀಕೃಷ್ಣ, ಭೀಮ, ದುರ್ಯೋಧನ, ಅರ್ಜುನ, ಅಭಿಮನ್ಯು ಜತೆಗೆ, ಸ್ತ್ರೀ ಪಾತ್ರಗಳಾದ ಕುಂತಿ, ಗಾಂಧಾರಿ, ಧ್ರೌಪದಿ ಪಾತ್ರಗಳಿಗೆ ಪುರುಷ ಪಾತ್ರಗಳಿಗೆ ಸಮಾನ ಕಲಾ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಹವ್ಯಾಸಿ ನಾಟಕಗಳಲ್ಲಿ ಮೂಲೆಗುಂಪಾಗಿರುವ ಕರ್ಣ, ದೃತರಾಷ್ಟ್ರ, ಭೀಷ್ಮ, ಧರ್ಮರಾಯ, ನಕುಲ, ಸಹದೇವರ ಪಾತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಒಟ್ಟಾರೆ ಬಿ. ಪುಟ್ಟಸ್ವಾಮಯ್ಯ ಅವರ ಆಶಯಕ್ಕೆ ತಕ್ಕಂತೆ ಎಲ್ಲಾ ವರ್ಗದ ಪ್ರೇಕ್ಷಕರು ನೋಡಿ, ಕಲಿಯಬಹುದಾದ ಒಳ್ಳೆಯ ಸಂದೇಶ ಇರುವಂತಹ ಕುರುಕ್ಷೇತ್ರ ನಾಟಕದ ಪ್ರದರ್ಶನ ಆಗಸ್ಟ್ ೭ ರಂದು ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿದೆ. ಸಮಯಕ್ಕೆ ಸರಿಯಾಗಿ ಬಂದು ನಾಟಕ ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಾಟಕದ ನಿರ್ದೇಶಕರು, ದುರ್ಯೋಧನದ ಪಾತ್ರದಾರಿಯೂ ಆಗಿರುವ ಶ್ರೀನಿವಾಸಮೂರ್ತಿ ನೀನಾಸಂ ಮನವಿ ಮಾಡಿದರು.
ಸುಮಾರು ೮ ಗಂಟೆಗಳ ನಾಟಕ ಇದಾಗಿದ್ದು, ಸರಿಯಾಗಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗಲಿದೆ. ನಾಟಕದ ಸಮಯದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಮಧ್ಯಂತರ ಬಿಡುವು ಇರುವುದಿಲ್ಲ. ಇಡೀ ನಾಟಕವನ್ನು ಪ್ರೇಕ್ಷಕರ ಮುಂದಿಡಬೇಕೆಂಬುದು ವೃತ್ತಿನಿರತ ಕಲಾವಿದರಾದ ನಮ್ಮ ಇಚ್ಚೆ ಯಾಗಿದೆ. ನಾಟಕದ ಸಾರಥ್ಯವನ್ನು ಭೀಮನ ಪಾತ್ರದಾರಿಗಳಾದ ಗಂಗಾಧರ್.ಎ.ಯಲ್ಲಾಪುರ ವಹಿಸಿದ್ದಾರೆ. ನಾಟಕದ ಸಂಗೀತ ನಿರ್ದೇಶನ ರುದ್ರೇಶ್ ವಿ. ಇರಕಸಂದ್ರ ಅವರದ್ದಾಗಿದೆ. ಹಿನ್ನೇಲೆ ಸಂಗೀತದಲ್ಲಿ ತಬಲ ದೇವರಾಜು ಯಲ್ಲಾಪುರ, ಕ್ಲಾರೋನೇಟ್ ಶೋಕೇಶ್‌ಕುಮಾರ್, ರಿಧಂ ಪ್ಯಾಡ್ ನಿಜು ಅವರು ಇದ್ದು, ಸ್ತ್ರೀಪಾತ್ರಗಳಲ್ಲಿ ಹೇಮ, ಆನಂತವೇಣಿ, ತಾರಾ, ಲಕ್ಷ್ಮಿ ಅವರುಗಳು ಅಭಿನಯಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಾರುತಿ ಗೆಳೆಯರ ಕಲಾ ಬಳಗದ ಗಂಗಾಧರ್ ಎ.ಯಲ್ಲಾಪುರ, ನಿಖಿಲ್ ರಾಜ್ ಅರಸ್, ರಾಜೇಂದ್ರಕುಮಾರ್, ಬಸವರಾಜು ಅದಲಾಪುರ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.