ನಾಳೆ ಕಿವೀಸ್-ಭಾರತ ಹಣಾಹಣಿ

ಕಾನ್ಪುರ,ನ.೨೪- ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭ ವಾಗಿದೆ. ೨ ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ ಕಾನ್ಪುರದಲ್ಲಿ ಆರಂಭವಾಗಲಿದೆ. ಈಗಾಗಲೇ ಟಿ-೨೦ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ.
ರಾಹುಲ್‌ದ್ರಾವಿಡ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಸರಣಿ ನಡೆಯುತ್ತಿದೆ. ಆದರೆ, ತಂಡದಲ್ಲಿ ಗಾಯಾಳು ಸಮಸ್ಯೆ ಉಂಟಾಗಿದೆ.
ಕರ್ನಾಟಕದ ಕೆ.ಎಲ್ ರಾಹುಲ್ ಈ ಸರಣಿಯಿಂದ ದೂರ ಉಳಿದಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯ ಪುನಶ್ಚೇತನ ತರಬೇತಿ ಶಿಬಿರಕ್ಕೆ ಸೇರಿಕೊಳ್ಳಲಿದ್ದಾರೆ. ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ನಾಳೆ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲಿ ೧೧ ಮಂದಿ ಆಟಗಾರರ ಪೈಕಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಕಾನ್ಪುರ ಕ್ರೀಡಾಂಗಣ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಿದ್ದು, ತಂಡದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಬಗ್ಗೆ ಆಯ್ಕೆ ಮಂಡಳಿ ಗಂಭೀರ ಚಿಂತನೆ ನಡೆಸಿದೆ.ಮಯಾಂಕ್ ಅಗರ್‌ವಾಲ್ ಅವರೊಂದಿಗೆ ಶುಭ್‌ಮನ್‌ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ನಾಳಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್‌ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದ್ದು, ಅಜಿಂಕ್ಯಾ ರೆಹಾನೆ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಟಿ-೨೦ ಸರಣಿಗೆ ಕೇನ್‌ವಿಲಿಯಮ್ಸ್‌ಗೆ ವಿಶ್ರಾಂತಿ ನೀಡಲಾಗಿತ್ತು.
ಈಗ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಿದ್ದು, ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಿದೆ.