ನಾಳೆ ಕನ್ನಡ ರಾಜ್ಯೋತ್ಸವ

ಬೆಂಗಳೂರು, ಅ. ೩೧- ನಾಳೆ ೬೫ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಂಡಿವೆ.
ಮೈಸೂರು ಬ್ಯಾಂಕ್ ವೃತ್ತ
ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ ೧೦ಕ್ಕೆ ಧ್ವಜಾರೋಹಣ, ಮಧ್ಯಾಹ್ನ ೧.೩೦ಕ್ಕೆ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಸರಳ ಉತ್ಸವ, ನಗರ ದೇವತೆ ಕನ್ನಡ ತಾಯಿ ಶ್ರೀ ಅಣ್ಣಮ್ಮ ದೇವತೆಯ ಮೆರವಣಿಗೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಮೆರವಣಿಗೆಗೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಆಗಮಿಸಲಿದ್ದು, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಪರಮೇಶ್ವರ ಪುಲಿಕೇಶಿ ಮಹಾಮಂಟಪ
ಬನಪ್ಪ ಆಟದ ಮೈದಾನದಲ್ಲಿ ನಾಳೆ ಬೆಳಿಗ್ಗೆ ೧೦ಕ್ಕೆ ಧ್ವಜಾರೋಹಣ, ೧೧ಕ್ಕೆ ಉದ್ಘಾಟನೆ ಹಾಗೂ ಕೊರೊನಾ ಸೇನಾನಿಗಳಿಗೆ ಪರಮೇಶ್ವರ ಪುಲಿಕೇಶಿ ಪ್ರಶಸ್ತಿ ಪ್ರದಾನ.
ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಚಾರ ವೇದಿಕೆಯ ಅಧ್ಯಕ್ಷ ಪಾಲನೇತ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೧೨ಕ್ಕೆ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ, ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ನೌಕರರ ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್ ಅವರು ಆಗಮಿಸಲಿದ್ದಾರೆ.