ನಾಳೆ ಎಣಿಕೆ: ನಿಷೇಧಾಜ್ಞೆ ಜಾರಿ

ಬೆಂಗಳೂರು, ಮೇ ೧೨- ರಾಜ್ಯ ವಿಧಾನಸಭಾ ಚುನಾವಣೆಯ ಮತ ಏಣಿಕೆ ಹಾಗೂ ಫಲಿತಾಂಶದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ನಗರದ ನಾಲ್ಕು ಕಡೆಗಳಲ್ಲಿ ನಡೆಯುವ ಮತ ಏಣಿಕೆ ಕೇಂದ್ರಗಳ ಬಳಿ ಭದ್ರತೆಗೆ ೧,೫೦೦ ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜು, ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಕಾಲೇಜು ಹಾಗೂ ತಿಲಕ್ ನಗರದ ಎಸ್‌ಎಸ್‌ಎಂಆರ್ ವಿ ಕಾಲೇಜುಗಳಲ್ಲಿ ಮತ ಏಣಿಕೆ ನಡೆಯಲಿದ್ದು ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿಗೆ ೨ ಡಿಸಿಪಿ, ೪ ಎಸಿಪಿ, ೨೦ ಇನ್ಸ್ ಪೆಕ್ಟರ್, ೭೨ ಪಿಎಸ್‌ಐ ಸೇರಿ ೫೦೬ ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಬಸವನಗುಡಿಯ ಬಿಎಂಎಸ್ ಕಾಲೇಜಿಗೆ ಇಬ್ಬರು ಡಿಸಿಪಿ, ೪ ಎಸಿಪಿ, ೧೮ ಇನ್ಸ್ ಪೆಕ್ಟರ್, ೪೦ ಪಿಎಸ್‌ಐ ಸೇರಿ ೨೭೫ ಸಿಬ್ಬಂದಿ, ತಿಲಕ್ ನಗರದ ಎಸ್‌ಎಸ್‌ಎಂಆರ್ ವಿ ಕಾಲೇಜಿಗೆ ಇಬ್ಬರು ಡಿಸಿಪಿ, ೫ ಎಸಿಪಿ, ೧೦ ಇನ್ಸ್ ಪೆಕ್ಟರ್, ೧೪ ಪಿಎಸ್‌ಐ ಸೇರಿ ೩೯೯ ಪೊಲೀಸ್ ಸಿಬ್ಬಂದಿ ಹಾಗೂ ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿಗೆ ಇಬ್ಬರು ಡಿಸಿಪಿ, ೩ ಎಸಿಪಿ, ೬ ಇನ್ಸ್ ಪೆಕ್ಟರ್, ೧೫ ಪಿಎಸ್‌ಐ ಸೇರಿ ೨೧೪ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬೆಳಗ್ಗೆ ೫ ಗಂಟೆಗೆ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ ಎಣಿಕೆ ಕೇಂದ್ರದ ಬಳಿ ಹಾಜರಿರಲು ಸೂಚನೆ ನೀಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಡಿಸಿಪಿಗಳ ಬಳಿ ವರದಿ ಮಾಡಿಕೊಳ್ಳಲು ಕೂಡ ಸೂಚಿಸಲಾಗಿದೆ.
ಸ್ಥಳೀಯ ಪೊಲೀಸರಲ್ಲದೆ ಕೇಂದ್ರದ ತುಕಡಿಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ಕೆಎಸ್‌ಆರ್‍ಪಿ, ಸಿಎಆರ್, ಡಿಸ್ವ್ಯಾಟ್, ವಾಟರ್ ಜೆಟ್, ಖಾಲಿ ವಾಹನಗಳನ್ನು ನಿಯೋಜಿಸಲಾಗಿದೆ. ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಕ್ತ ಬಂದೋಬಸ್ತ್ ಮಾಡಿ ಉಸ್ತುವಾರಿ ವಹಿಸಿದ್ದಾರೆ.
ನಿಷೇದಾಜ್ಞೆ ಜಾರಿ:
ಫಲಿತಾಂಶ ಪ್ರಕಟ ಹಿನ್ನಲೆಯಲ್ಲಿ ನಾಳೆ ನಗರದಾದ್ಯಂತ ಸೆಕ್ಷನ್ ೧೪೪ ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಮತ ಎಣಿಕೆ ಸಮಯದಲ್ಲಿ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರವಾಗಿ ಪ್ರತಿಭಟನೆ ಗಲಾಟೆ ಮಾಡುವ ಸಾಧ್ಯತೆಯಿಂದ ಮತ ಎಣಿಕೆ ಕೇಂದ್ರಗಳು ಸೇರಿದಂತೆ ನಗರದೆಲ್ಲೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ೫ ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು ನಿಷೇಧ. ಮದುವೆ ಹಾಗೂ ಶವಸಂಸ್ಕಾರವನ್ನ ಹೊರತುಪಡಿಸಿ ಉಳಿದೆಲ್ಲದಕ್ಕೂ ಪ್ರತಿಬಂಧಕಾಜ್ಞೆ ಅನ್ವಯವಾಗಲಿದೆ. ಮೇ ೧೩ರಂದು ಬೆಳಗ್ಗೆ ೬ ಗಂಟೆಯಿಂದ ಮಧ್ಯರಾತ್ರಿ ೧೨ರ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ.