ನಾಳೆ ಉಪರಾಷ್ಟ್ರಪತಿ ಚುನಾವಣೆ


ನವದೆಹಲಿ,ಆ.೫- ದೇಶದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪದಗ್ರಹಣ ಮಾಡಿದ ಬೆನ್ನಲ್ಲೆ ನಾಳೆ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಜಗದೀಪ್ ಧನ್‌ಕರ್ ಹಾಗೂ ಯುಪಿಎ ಅಭ್ಯರ್ಥಿ ಮಾರ್ಗರೇಟ್ ಆಳ್ವ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರ ಅವಧಿ ಈ ತಿಂಗಳ ೧೦ ರಂದು ಮುಗಿಯಲಿದ್ದು, ಹೀಗಾಗಿ ನೂತನ ಉಪರಾಷ್ಟ್ರಪತಿಗಳ ಆಯ್ಕೆಗೆ ನಾಳೆ ಮತದಾನ ನಡೆಯಲಿದೆ.
ನಾಳಿನ ಉಪರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ದೆಹಲಿಯ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಪರಾಷ್ಟ್ರಪತಿ ಚುನಾವಣೆಗೆ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರುಗಳು ಮತದಾರರಾಗಿದ್ದು, ರಾಜ್ಯಸಭೆಯ ೨೩೩ ಚುನಾಯಿತ ಸದಸ್ಯರು, ೧೨ ನಾಮಕರಣ ಸದಸ್ಯರು, ಲೋಕಸಭೆಯ ೫೪೩ ಚುನಾಯಿತ ಸದಸ್ಯರೂ ಸೇರಿದಂತೆ ಒಟ್ಟು ೭೮೮ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ.
ಧನಕರ್ ಆಯ್ಕೆ ಖಚಿತ
ಉಪರಾಷ್ಟ್ರಪತಿ ಚುನಾವಣೆಯನ್ನು ಸುಲಭವಾಗಿ ಗೆದ್ದ ಎನ್‌ಡಿಎ ಮೈತ್ರಿಕೂಟ, ನಾಳಿನ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಬಹುಮತ ಹೊಂದಿರುವುದರಿಂದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನ್‌ಕರ್ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ನೂತನ ಉಪರಾಷ್ಟ್ರಪತಿಯಾಗಲಿರುವ ಧನ್‌ಕರ್ ಅವರು ಸದ್ಯ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದು, ಮೂಲತಃ ರಾಜಸ್ತಾನದವರಾಗಿದ್ದು, ಪ್ರಬಲ ಜಾಟ್ ಸಮುದಾಯಕ್ಕೆ ಸೇರಿದವರು.
ನಾಳಿನ ಉಪರಾಷ್ಟ್ರಪತಿ ಚುನಾವಣೆ ಬೆಳಿಗ್ಗೆ ೧೦ಕ್ಕೆ ಆರಂಭವಾಗಲಿದ್ದು, ಸಂಜೆ ೪ ಗಂಟೆಗೆ ಮತದಾನ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ನಡೆದು ನಾಳೆ ಸಂಜೆಯ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ.

ಆಳ್ವಾಗೆ ಟಿಆರ್‌ಎಸ್ ಬೆಂಬಲ
ಹೈದರಾಬಾದ್,ಆ೫:ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಬೆಂಬಲಿಸುವುದಾಗಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಇಂದು ತಿಳಿಸಿದೆ.
ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಸಂಯುಕ್ತ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅದರಂತೆಯೇ ಟಿಆರ್‌ಎಸ್ ಸಂಸದರಿಗೆ ಮತದಾನ ಮಾಡುವಂತೆ ಸೂಚಿಸಲಾಗಿದೆ ಎಂದು ಟಿಆರ್‌ಎಸ್‌ನ ಸಂಸದೀಯ ನಾಯಕ ಕೇಶವ್ ರಾವ್ ಸಂಸತ್ತಿನ ಹೊರಗೆ ಹೇಳಿದರು.
ರಾಷ್ಟ್ರಪತಿ ಚುನಾವಣೆಯಲ್ಲೂ ಟಿಆರ್‌ಎಸ್ ವಿರೋಧ ಪಕ್ಷದ ಪರವಾಗಿ ನಿಂತು ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿತ್ತು. ಇಂದು ಸಂಜೆ ಮಾರ್ಗರೇಟ್ ಆಳ್ವಾ ಟಿಆರ್‌ಎಸ್ ಸಂಸದರನ್ನು ಭೇಟಿ ಮಾಡಲಿದ್ದಾರೆ ಎಂದು ರಾವ್ ತಿಳಿಸಿದ್ದಾರೆ.ಆಳ್ವ ಅವರು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ವಿರುದ್ಧ ಪ್ರತಿಪಕ್ಷಗಳಿಂದ ಉಪರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿದಿದ್ದಾರೆ.