ನಾಳೆ ಇಸ್ರೊಗೆ ಮೋದಿ ಭೇಟಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೫:ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ ಸುರಕ್ಷಿತವಾಗಿ ತಲುಪಿಸಲು ಇಸ್ರೊ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬೆಂಗಳೂರಿನ ಇಸ್ರೊ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ಚಾರಿತ್ರಿಕ ಸಾಧನೆ ಮಾಡಿದ ಇಸ್ರೊ ಅಧ್ಯಕ್ಷ ಸೋಮನಾಥ್ ನೇತೃತ್ವದ ತಂಡವನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಇಸ್ರೊ ಕಚೇರಿಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ.
ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಕೆಯಾದ ವೇಳೆ ಮೋದಿ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ನೇರ ಪ್ರಸಾರ ವೀಕ್ಷಿಸಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದರು.
ಈಗಾಗಲೇ ಗ್ರೀಸ್‌ಗೆ ತೆರಳಿರುವ ಮೋದಿ ಅವರು ಅಲ್ಲಿಂದಲೇ ಬೆಳಿಗ್ಗೆ ೫.೫೫ಕ್ಕೆ ಗಂಟೆಗೆ ಹೆಚ್‌ಎಎಲ್ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅರ್ಧ ತಾಸುಗಳ ಕಾಲ ಮೋದಿ ಅವರು ವಿಶ್ರಾಂತಿ ಪಡೆದ ನಂತರ ೬.೩೦ಕ್ಕೆ ಇಸ್ರೊ ಕಚೇರಿಗೆ ತೆರಳಲಿದ್ದಾರೆ. ಸಿಬ್ಬಂದಿಗಳನ್ನು ಅಭಿನಂದಿಸಿ ಅವರ ಜತೆ ಪ್ರಧಾನಿಗಳು ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನಾಳೆ ನಸುಕಿನ ಜಾವ ೪:೩೦ ರಿಂದ ಬೆಳಿಗ್ಗೆ ೯:೩೦ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಬೆಂಗಳೂರು ಸಂಚಾರಿ ಪೋಲಿಸರು ಮನವಿ ಮಾಡಿದ್ದಾರೆ.
ಓಲ್ಡ್ ಏರ್ಪೋರ್ಟ್ ರಸ್ತೆ,ಓಲ್ಡ್ ಮದ್ರಾಸ್ ರಸ್ತೆ,ಎಂ.ಜಿ.ರಸ್ತೆ,ಕಬ್ಬನ್ ರಸ್ತೆ,ರಾಜಭವನ ರಸ್ತೆ,ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್),
ಸಿವಿ ರಾಮನ್ ರಸ್ತೆ,ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ)
ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ)ಗುಬ್ಬಿ ತೋಟದಪ್ಪ ರಸ್ತೆ
ಜಾಲಹಳ್ಳಿ ಕ್ರಾಸ್ ರಸ್ತೆಯಲ್ಲಿ ನಾಳೆ ಬೆಳಗಿನ ಜಾವ ೪ ಗಂಟೆಯಿಂದ ಬೆಳಗ್ಗೆ ೧೧ ಗಂಟೆಯವರೆಗೆ ಭಾರೀ ಸರಕು ಸಾಗಾಣಿಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪಕ್ಷದ ಪ್ರಮುಖ ನಾಯಕರು ವಿಮಾನನಿಲ್ದಾಣಕ್ಕೆ ತೆರಳಲಿದ್ದಾರೆ. ಎಂದು ಮೂಲಗಳು ತಿಳಿಸಿವೆ.

ಮೋದಿ ಕಾರ್ಯಕ್ರಮ

  • ನಾಳೆ ಬೆಳಿಗ್ಗೆ ೫.೫೫ಕ್ಕೆ ಹೆಚ್‌ಎಎಲ್ ಏರ್‌ಪೋರ್ಟ್‌ಗೆ ಮೋದಿ ಆಗಮನ
  • ಬೆಳಿಗ್ಗೆ ೬.೩೦ರವರೆಗೆ ಏರ್‌ಪೋರ್ಟ್‌ನಲ್ಲೇ ವಿಶ್ರಾಂತಿ.
  • ಬೆಳಿಗ್ಗೆ ೭ ಗಂಟೆಗೆ ಇಸ್ರೊ ಕಚೇರಿಗೆ ಭೇಟಿ
  • ಬೆಳಿಗ್ಗೆ ೮ ಗಂಟೆವರೆಗೂ ಇಸ್ರೊ ಕಚೇರಿಯಲ್ಲಿ ಮೋದಿ ಸಭೆ
  • ೮.೫೫ಕ್ಕೆ ಬೆಂಗಳೂರಿನಿಂದ ಮೋದಿ ದೆಹಲಿಗೆ ವಾಪಸ್

ರೋವರ್ ಹೊರ ಬಂದ ದೃಶ್ಯ
ಚಂದ್ರಯಾನ ರೋವರ್ ಪ್ರಗ್ಯಾನ್ ವಿಕ್ರಂ ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ಸಂದರ್ಭದ ವೀಡಿಯೊವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಎಕ್ಸ್‌ನಲ್ಲಿಂದು ಹಂಚಿಕೊಂಡಿದೆ. ಈ ಮೂಲಕ ಲ್ಯಾಂಡರ್‌ನಿಂದ ಹೊರ ಬಂದ ರೋವರ್ ತನ್ನ ಕಾರ್ಯವನ್ನು ಆರಂಭಿಸಿದೆ.
ಚಂದ್ರಯಾನ-೩ ರೋವರ್, ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ಚಲಿಸಿತು ಎಂಬ ದೃಶ್ಯ ಇಲ್ಲಿದೆ ಎಂದು ಬರೆದುಕೊಂಡಿದೆ. ಮೊನ್ನೆಯಷ್ಟೆ ಚಂದ್ರನ ಮೇಲೆ ವಿಕ್ರಮ ಯಶಸ್ವಿಯಾಗಿ ಇಳಿಸಲಾಗಿತ್ತು.
ವಿಕ್ರಂ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೊ ಮಾಹಿತಿ ನೀಡಿದ ಬೆನ್ನಲ್ಲೆ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರ ಬಂದಿರುವ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ಲ್ಯಾಂಡರ್‌ನಿಂದ ರೋವರ್ ಹೊರ ಬರುತ್ತಿರುವ ದೃಶ್ಯ ವಿಸ್ಮಯಕ್ಕೆ ಕಾರಣವಾಗಿದೆ.
ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈನಲ್ಲಿ ಹೊರಗೆ ಬಂದು ಹೇಗೆ ಹೆಜ್ಜೆ ಹಾಕಿರುವ ದೃಶ್ಯಗಳನ್ನು ಈ ವೀಡಿಯೊದಲ್ಲಿ ವೀಕ್ಷಿಸಬಹುದಾಗಿದೆ.