(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಸೆ24: ಅಳ್ನಾವರ ಹಾಗೂ ಖಾನಾಪೂರ ತಾಲೂಕನ್ನು ಬರಪೀಡಿತ ಘೋಷಣೆ ಮಾಡಬೇಕು ಜೊತೆಗೆ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ.25 ರಂದು ಬೆಳಿಗ್ಗೆ 6 ರಿಂದ ಅಳ್ನಾವರ ಪಟ್ಟಣ ಹಾಗೂ ರಾಜ್ಯ ಹೆದ್ದಾರಿ ಬಂದ್ ಕರೆ ಕೊಡಲಾಗಿದೆ ಎಂದು ಅಳ್ನಾವರ ತಾಲೂಕು ಅಧ್ಯಕ್ಷ ಅಲ್ಲಾಭಕ್ಷ ಕುಂದುಬೈನವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರೈತರ ಜಮೀನಿನ ಬೆಳೆ ಸಂಪೂರ್ಣವಾಗಿ ಬೆಳೆವಣಿಗೆ ಆಗದೇ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಗಮನಕ್ಕೆ ತರಲಾಗಿದೆ. ಆದರೂ ಸಹಿತ ಸರ್ಕಾರ ಕಲಘಟಗಿ, ಅಳ್ನಾವರ ಹಾಗೂ ಖಾನಾಪೂರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಅಧಿಕಾರಿಗಳು ಈ ಅನ್ಯಾಯವನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿ ಅಳ್ನಾವರ ಪಟ್ಟಣ ಹಾಗೂ ರಾಜ್ಯ ಹೆದ್ದಾರಿ ಬಂದ್ ಕರೆಯನ್ನು ಘೋಷಣೆ ಮಾಡಲಾಗಿದೆ ಎಂದರು.
ಅಂದು ಕಲಘಟಗಿ, ಅಳ್ನಾವರ, ಖಾನಾಪೂರ ತಾಲೂಕನ್ನು ಬರಪೀಡಿತ ಘೋಷಣೆ ಮಾಡುವುದು, ರೈತರು ಪಡೆದ ಬ್ಯಾಂಕಿನ ಬೆಳೆಸಾಲ ಹಾಗೂ ಇತರೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು. ಈ ರೈತ ಹೋರಾಟದಲ್ಲಿ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರವಿರಾಜ ಕಂಬಳಿ, ಈರಪ್ಪ ಶಿಂಧೆ, ದಾಧಾಪೀರ ಸಾಬನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.