ನಾಳೆ ಅಭಿಮಾನಿಗಳು, ಕಾರ್ಯಕರ್ತರ ಬೃಹತ್ ಬಹಿರಂಗ ಸಭೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.26: ಮಂಡ್ಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ (ಮಾ.27) ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಪಕ್ಷದ ಕಛೇರಿಯಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರ ಪೂರ್ವಬಾವಿ ಸಭೆ ನಡೆಸಿ ಅವರು ಮಾತನಾಡಿದರು.
ಮಾ.27 ರ ಬುಧವಾರ ಮದ್ಯಾಹ್ನ 1.30 ಘಂಟೆಗೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಬಹಿರಂಗ ಮತ ಪ್ರಚಾರ ಸಭೆ ನಡೆಯಲಿದ್ದು ಕಾಂಗ್ರಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಸಿ.ಡಿ.ಗಂಗಾಧರ್ ತಿಳಿಸಿದರು.
ಕೆ.ಆರ್.ಪೇಟೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲದೆ ಇರಬಹುದು. ಇದರಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯತೆಯಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಇಲ್ಲಿನ ಸ್ಥಳೀಯ ನಾಯಕರು ಪಕ್ಷದ ಕಾರ್ಯಕರ್ತರ ನೋವು ನಲಿವುಗಳಿಗೆ ಧ್ವನಿಯಾಗುತ್ತಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಆದ ವೈಪಲ್ಯವನ್ನು ಕಾರ್ಯಕರ್ತರು ತಮ್ಮ ಮನಸ್ಸಿನಿಂದ ಕಿತ್ತು ಹಾಕಿ ಹೊಸ ಹುಮ್ಮಸ್ಸಿನಿಂದ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಯಾಚನೆ ಮಾಡಬೇಕು. ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಅತೀ ಹೆಚ್ಚಿನ ಬಹುಮತ ನೀಡುವ ಮೂಲಕ ವಿಧಾನ ಸಭೆ ಚುನಾವಣೆಯ ಸೋಲಿನ ಕಹಿಯನ್ನು ಮರೆಯಬೇಕು. ಸ್ಟಾರ್ ಚಂದ್ರು ಗೆದ್ದರೆ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲ ಎನ್ನುವ ಕಾರ್ಯಕರ್ತರ ಕೊರಗನ್ನು ಅಳಿಸಿ ಹಾಕುತ್ತಾರೆ ಎಂದ ಸಿ.ಡಿ.ಗಂಗಾಧರ್ ಮುಖಂಡರು ಕಾರ್ಯಕರ್ತರುಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಜನರ ಮುಂದೆ ಮತಯಾಚಿಸಬೇಕೆಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಲೇ ಬೇಕು. ಇದಕ್ಕಾಗಿ ಎಲ್ಲರೂ ಒಗ್ಗೂಡಿ ವ್ಯವಸ್ಥಿತವಾಗಿ ಚುನಾವಣೆ ಮಾಡಬೇಕು.
ಮಹಿಳೆಯರು ಮತ್ತು ಅಹಿಂದಾ ಮತದಾರರನ್ನು ಕೇಂದ್ರೀಕರಿಸಿ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳ ಫಲವನ್ನು ಮಹಿಳಾ ಮತದಾರರಿಗೆ ಮನವರಿಕೆ ಮಾಡಿ ಅವರ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಬೇಕು. ಇದಕ್ಕಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು. ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಚಾರ ತಂಡಗಳು ಪ್ರತಿ ಹಳ್ಳಿಗೂ ಆಗಮಿಸಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಮಹಿಳಾ ಮತದಾರರಿಗೆ ಮನವರಿಕೆ ಮಾಡಲಿದ್ದಾರೆ. ಈ ಸಂದರ್ಬದಲ್ಲಿ ಬೂತ್ ಕಾರ್ಯಕರ್ತರು ಮಹಿಳಾ ಮತ ಪ್ರಚಾರಕ ತಂಡದೊಂದಿಗೆ ಸಹಕರಿಸಬೇಕು. ಚುನಾವಣೆಯ ಸಂದರ್ಭದಲ್ಲಿ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು. ಪಕ್ಷ ಸೇರ್ಪಡೆಯಾಗಲು ಬಯಸುವ ಯುವಕರು ಮತು ಅನ್ಯ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಪಕ್ಷದ ವೇದಿಕೆಗೆ ಕರೆತರುವ ಕೆಲಸ ಮಾಡಬೇಕು. ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಯಾವುದೇ ಕಾರಣಕ್ಕೂ ಸ್ಥಳೀಯ ಮಟ್ಟದಲ್ಲಿ ಅಡ್ಡಿಪಡಿಸಬಾರದೆಂದು ಕಿವಿ ಮಾತು ಹೇಳಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಸಭೆ ನಡೆಸಿ ಮತದಾರರನ್ನು ಮುಟ್ಟುವ ಕೆಲಸ ಮಾಡುವಂತೆ ಮುಖಂಡರುಗಳಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ವಿಜಯ ರಾಮೇಗೌಡ, ಕೋಡೀಮಾರನಹಳ್ಳಿ ದೇವರಾಜು, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಐಪನಹಳ್ಳಿ ನಾಗೇಂದ್ರಕುಮಾರ್, ಎಂ.ಡಿ.ಕೃಷ್ಣಮೂರ್ತಿ, ಸೇರಿದಂತೆ ಹಲವರು ಸಭೆಯಲ್ಲಿದ್ದರು.