ನಾಳೆ ಅಭಿನಂದನಾ ಸಮಾರಂಭ

ಹುಬ್ಬಳ್ಳಿ, ಏ 5: ಬಹುದಿನಗಳ ಬೇಡಿಕೆಯಾಗಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನಗೊಳಿಸಿದ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಅಭಿನಂದನಾ ಸಮಾರಂಭವನ್ನು ನಾಳೆ ನಗರದ ನೆಹರೂ ಮೈದಾನದಲ್ಲಿ ಬೆಳಿಗ್ಗೆ 11.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರಾದ ಸಿ.ಸಿ. ಪಾಟೀಲ್ ಹಾಗೂ ಎಂಎಲ್‍ಸಿ ಎನ್. ರವಿಕುಮಾರ್ ಹೇಳಿದರು.
ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎ. ನಾರಾಯಣಸ್ವಾಮಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಇನ್ನಿತರ ಸಚಿವ ಸಂಪುಟದ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಜೇನುಗೂಡಿಗೆ ಕೈ ಹಾಕಬಾರದು ಎಂದು ಹೇಳಿದ್ದರು. ಆದರೇ ಅದೇ ಜೇನು ಗೂಡಿಗೆ ನಾವು ಕೈ ಹಾಕಿ ಯಶಸ್ವಿಯಾಗಿದ್ದೇವೆ. ಇದಕ್ಕೆ ಕೇಂದ್ರದ ಒಪ್ಪಿಗೆಯೂ ಸಿಗಲಿದೆ ಎಂದ ಅವರು ತಾಕತ್ತಿದ್ದರೆ ಕಾಂಗ್ರೆಸ್ ರದ್ದುಗೊಳಿಸಲಿ ಎಂದು ಸವಾಲ್ ಹಾಕಿದರು.
ಒಳ ಮೀಸಲಾತಿ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಒಳ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದ್ದು, ಕಾಂಗ್ರೆಸ್ ವಿನಾ ಕಾರಣ ಪ್ರತಿರೋಧ ಒಡ್ಡುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿತ್ತು ಎಂದು ಆರೋಪಿಸಿರು.
ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕ ಅಮೃತ್ ದೇಸಾಯಿ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ನೆಹರೂ ಓಲೆಕಾರ, ಮಹೇಂದ್ರ ಕೌತಾಳ ಮತ್ತಿತರರು ಉಪಸ್ಥಿತರಿದ್ದರು.