ನಾಳೆ ಅಫಜಲಪುರಕ್ಕೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಆಗಮನ: ಪಾಟೀಲ್

ಅಫಜಲಪುರ: ಮಾ.30:ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ರಾಧಾಕೃಷ್ಣ ದೊಡ್ಮನಿ ಮಾರ್ಚ್ 31ರ ರವಿವಾರದಂದು ಸಾಯಂಕಾಲ 4 ಗಂಟೆಗೆ ಪಟ್ಟಣದ ನ್ಯಾಷನಲ್ ಫಂಕ್ಷನ್ ನಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಶಕ್ತಿಯುತವಾಗಿ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದೇವೆ. ಕಳೆದ ಬಾರಿ ಆಗಿರುವ ಹಿನ್ನಡೆಗಿಂತ ಹೆಚ್ಚಿನ ಮತಗಳ ಮುನ್ನಡೆಯನ್ನು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ನೀಡುವ ನಿಟ್ಟಿನಲ್ಲಿ ಸಿದ್ಧಗೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ 5 ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದು ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹ ಸಂಸದ ಡಾ.ಉಮೇಶ ಜಾಧವ ಅಫಜಲಪುರಕ್ಕೆ ಹೇಳಿಕೊಳ್ಳುವ ಹಾಗೆ ಯಾವುದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಸಾಕಷ್ಟು ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ನಾವು ಈ ಬಾರಿ ಜನರ ಮನಸ್ಸು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ನೀಡುತ್ತೇವೆ. ಕಾರಣಾಂತರಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮಿಂದ ದೂರವಾದ ಜಾತ್ಯಾತೀತ ಮುಖಂಡರು ಜಾತ್ಯಾತೀತ ನಾಯಕ ಎಂದು ನಂಬಿ ಕೆಲವರನ್ನು ಬೆಂಬಲಿಸಿದ್ದಾರೆ. ಆದರೆ ಕೆಲವೇ ದಿನಗಳ ಬಳಿಕ ಅವರ ಜಾತಿವಾದಿ ಮನಸ್ಥಿತಿ ಗೊತ್ತಾಗಿದೆ ಹೀಗಾಗಿ ಅವರೆಲ್ಲರೂ ನಮ್ಮ ಪಕ್ಷದ ಜೊತೆ ಇದ್ದಾರೆ ಎಂಬ ಸಂಪೂರ್ಣ ಭರವಸೆ ಇದೆ ಎಂದು ತಿಳಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ನೀಡುವ ಮೂಲಕ ರಾಜ್ಯದ ಜನ ಬೆಂಬಲಿಸಿದ್ದಾರೆ.ಅದರಂತೆ ಭರವಸೆ ನೀಡಿದಂತೆ 5 ಗ್ಯಾರಂಟಿಗಳು ಸಹ ಅನುಷ್ಠಾನಕ್ಕೆ ತಂದಿದ್ದಾರೆ.ಹೀಗಾಗಿ ಈ ಬಾರಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ಬರಲಿದೆ.ಗ್ಯಾರೆಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಸಾಕಷ್ಟು ಅನುಕೂಲವಾಗುತ್ತಿದೆ.ಹೀಗಾಗಿ ಕಲಬುರಗಿ ಲೋಕಸಭೆ ಚುನಾವಣೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಗೆಲುವು ಸಾಧಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ,ಜಿಪಂ ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ, ಯೂಥ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಅಂಬರೀಷ್ ಬುರಲಿ, ನಗರಾಧ್ಯಕ್ಷ ಮಾಜೀದ ಪಟೇಲ್, ನಾಗೇಶ್ ತೆಲ್ಲುಣಗಿ, ಪ್ರೀತಮ್ ಚವ್ಹಾಣ್, ವಿಶ್ವನಾಥ ಮಲಘಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.