ನಾಳೆ ಅನ್ನಭಾಗ್ಯ- ಗೃಹ ಜ್ಯೋತಿ ಜಾರಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೩೦:ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ವಿಧ್ಯುಕ್ತವಾಗಿ ಜಾರಿಗೆ ಬರಲಿದೆ. ೫ ಕೆಜಿ ಅಕ್ಕಿಯ ಜತೆಗೆ ಬಾಕಿ ೫ ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಬ್ಯಾಂಕ್‌ಖಾತೆಗೆ ಹಣ ಜಮೆಯಾಗಲಿದೆ. ಇದರ ಜತೆಗೆ ಉಚಿತ ೨೦೦ ಯುನಿಟ್ ಉಚಿತ ವಿದ್ಯುತ್ ಯೋಜನೆಯೂ ಜಾರಿಗೆ ಬರಲಿದೆ.ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ೧೦ ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಕೇಂದ್ರ ಸರ್ಕಾರ ನೀಡುವ ೫ ಕೆಜಿ ಅಕ್ಕಿ ಜತೆಗೆ ರಾಜ್ಯಸರ್ಕಾರ ಇನ್ನೂ ೫ ಕೆಜಿ ಅಕ್ಕಿ ನೀಡಲು ಮುಂದಾಗಿತ್ತು.ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಯನ್ನು ನೀಡಲು ನಿರಾಕರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿ ಹಣ ನೀಡುತ್ತೇವೆ. ರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ನೀಡುವಂತೆ ಮನವಿ ಮಾಡಿದ್ದರು.ಮತ್ತೊಂದೆಡೆ ಸಚಿವ ಕೆ.ಎಚ್ ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್‌ರವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿಪತ್ರ ಸಲ್ಲಿಸಿದ್ದರು. ಆದರೆ, ರಾಜ್ಯಸರ್ಕಾರದ ಮನವಿಯನ್ನು ಪಿಯೂಷ್ ಗೋಯಲ್ ನಿರಾಕರಿಸಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಈ ವಿದ್ಯಮಾನಗಳ ಬೆನ್ನಲ್ಲೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಕೇಂದ್ರದಿಂದ ಅಕ್ಕಿ ದೊರೆತಿಲ್ಲ. ಬೇರೆ ರಾಜ್ಯಗಳಿಂದ ಅಕ್ಕಿ ಸಿಗದ ಕಾರಣ ೫ ಕೆಜಿ ಅಕ್ಕಿಯ ಜತೆಗೆ ೫ ಕೆಜಿ ತಗಲುವ ಹಣವನ್ನು ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಾಕಲು ತೀರ್ಮಾನ ಕೈಗೊಳ್ಳಲಾಗಿತ್ತು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಜನರ ಬ್ಯಾಂಕ್‌ಖಾತೆಗೆ ಹಣ ಜಮೆ ಮಾಡಲಾಗುವುದು, ಪ್ರತಿ ಕೆಜಿ ಅಕ್ಕಿಗೆ ೩೪ ರೂ.ನಂತೆ ಒಬ್ಬ ವ್ಯಕ್ತಿಗೆ ೫ ಕೆಜಿ ಅಕ್ಕಿಯ ಹಣ ದೊರೆಯಲಿದೆ. ಪ್ರತಿ ಕೆಜಿಗೆ ೩೪ ರೂ.ನಂತೆ ೫ ಕೆಜಿ ಅಕ್ಕಿಗೆ ೧೭೦ ರೂ.ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.ಒಂದು ಮನೆಯಲ್ಲಿ ಐವರು ಸದಸ್ಯರಿದ್ದರೆ ಪ್ರತಿ ಕೆಜಿಗೆ ೩೪ ರೂ.ನಂತೆ ೨೫ ಕೆಜಿ ಅಕ್ಕಿಗೆ ೮೫೩ ದೊರೆಯಲಿದೆ ಎಂದರು.ಅಕ್ಕಿ ಕೊಡುವವರಿಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಅಕ್ಕಿ ಸಿಕ್ಕಕೂಡಲೇ ೧೦ ಕೆಜಿ ಅಕ್ಕಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಪಡಿತರ ಚೀಟಿ ಪ್ರಕಾರ ಯಾರು ಮುಖ್ಯಸ್ಥರಿದ್ದಾರೋ ಅವರ ಖಾತೆಗೆ ಹಣ ಜಮೆಯಾಗಲಿದೆ.ಬಹುತೇಕ ಮಂದಿ ಬ್ಯಾಂಕ್‌ಖಾತೆ ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ತೆರೆದರೆ ಅವರ ಖಾತೆಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.ದಕ್ಷಿಣ ಭಾಗದ ಜನರಿಗೆ ರಾಗಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಜೋಳ ಕೊಡುತ್ತೇವೆ, ರಾಗಿ ದಾಸ್ತಾನು ಇದ್ದು, ಜೋಳ ಸಂಗ್ರಹಿಸಲಾಗುತ್ತಿದೆ. ಈ ಎರಡೂ ಧಾನ್ಯಗಳು ಶೇಖರಣೆಯಾದ ನಂತರ ಹಂಚಿಕೆ ಮಾಡುತ್ತೇವೆ. ಹಣ ಸಿದ್ಧತೆ ಮಾಡಿಕೊಂಡಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ. ಅನ್ನಭಾಗ್ಯ ಯೋಜನೆ ಜಾರಿಗೆ ಸಮಾವೇಶ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಎಂಸಿಪಿ ಮೂಲಕ ಧಾನ್ಯ ಖರೀದಿ ಮಾಡಿ ೨ ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ, ಹೀಗಾಗಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈಗ ಅಕ್ಕಿ ಬದಲು ಹಣ ವರ್ಗಾವಣೆ ಮಾಡುತ್ತೇವೆ. ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ಹಂಚಿಕೆ ಮಾಡುತ್ತೇವೆ. ಇಲ್ಲದಿದ್ದರೆ ಅಕ್ಕಿ ಖರೀದಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.ಗೃಹಜ್ಯೋತಿ ಯೋಜನೆಕಾಂಗ್ರೆಸ್ ಸರ್ಕಾರ ಘೋಷಿಸಿರುವ ೨೦೦ ಯುನಿಟ್ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆ ನಾಳೆಯಿಂದಲೇ ಜಾರಿಗೆ ಬರಲಿದೆ. ಜೂ. ೧೨ ರಂದು ಶಕ್ತಿ ಯೋಜನೆ ಅನುಷ್ಠಾನಗೊಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಗೃಹಜ್ಯೋತಿ ಯೋಜನೆಗೂ ಚಾಲನೆ ನೀಡಲಿದೆ.ಗೃಹಯೋಜನೆಗೆ ಈಗಾಗಲೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಉಚಿತ ವಿದ್ಯುತ್ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ನಾಳೆಯಿಂದ ಬಳಸುವ ೨೦೦ ಯುನಿಟ್ ಒಳಗಿನ ಸರಾಸರಿ ವಿದ್ಯುತ್‌ಗೆ ಬಿಲ್ ಕಟ್ಟುವಂತಿಲ್ಲ.ಜುಲೈ ತಿಂಗಳ ವಿದ್ಯುತ್ ಬಿಲ್ ಅಗಸ್ಟ್‌ನಲ್ಲಿ ಬರಲಿದೆ. ೧೨ ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತದೆ. ಈ ಅವಧಿಯಲ್ಲಿ ಹೆಚ್ಚು ವಿದ್ಯುತ್ ಬಳಸಿದರೆ ಮಾತ್ರ ಬಿಲ್ ಕಟ್ಟಬೇಕಾಗಿದೆ.೧೨ ತಿಂಗಳ ಸರಾಸರಿಯ ಬಿಲ್‌ನಲ್ಲಿ ೨೦೦ ಯುನಿಟ್ ಜತೆ ೧೦ ಯುನಿಟ್ ಹೆಚ್ಚಳವಾದರೂ ಬಿಲ್ ಪಾವತಿ ಮಾಡಬೇಕಾಗಿದೆ.
ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ೭೭,೨೦,೨೦೭ ಮಂದಿ ಅರ್ಜಿ ನೋಂದಾಯಿಸಿಕೊಂಡಿದ್ದಾರೆ.

ಜುಲೈ ೧೪ ಗೃಹಲಕ್ಷ್ಮಿ ಯೋಜನೆ
ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ೨ ಸಾವಿರ ರೂ. ನೀಡುವ ಗೃಹಲಕ್ಷ್ಮಿಯೋಜನೆಗೆ ಅರ್ಜಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪ್ರತಿ ಮನೆ ಯಜಮಾನಿಯ ಖಾತೆಗೆ ೨ ಸಾವಿರ ರೂ. ಜಮೆಯಾಗಲಿದೆ.ಈ ಯೋಜನೆ ಅನುಷ್ಠಾನಕ್ಕೆ ಆಪ್ ಸಿದ್ಧಪಡಿಸಲು ತಡವಾಗಿದ್ದರಿಂದ ನೋಂದಾವಣಿ ಪ್ರಕ್ರಿಯೆ ಮುಂದೂಡಲಾಗಿತ್ತು.