ನಾಳೆ ಅಥಣಿ ಶಿವಯೋಗಿಗಳ ಜಯಂತಿ ಉತ್ಸವ

ಅಥಣಿ :ಜೂ.18: ಪಟ್ಟಣದಲ್ಲಿರುವ ಸುಕ್ಷೇತ್ರ ಗಚ್ಚಿನಮಠದಲ್ಲಿ ನಾಳೆ ಸೋಮವಾರ 19ರಂದು ಮಹಾತಪಸ್ವಿ ಲಿo. ಶ್ರೀ ಮುರುಘೇಂದ್ರ ಶಿವಯೋಗಿಗಳ 188ನೆಯ ಜಯಂತಿ ಉತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸುಕ್ಷೇತ್ರ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಶಿವಯೋಗಿಗಳ ಜಯಂತಿ ಉತ್ಸವ ಅಂಗವಾಗಿ ಸೋಮವಾರ ಮುಂಜಾನೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ ಜರುಗಲಿದೆ.
ಮುಂಜಾನೆ 8 ಗಂಟೆಗೆ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.
ಸಾಯಂಕಾಲ 6 ಗಂಟೆಗೆ ಧರ್ಮಸಭೆ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗಡಹಿಂಗ್ಲಜದ ಬಸವಕಿರಣ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮಣ ಸವದಿ ಅವರಿಗೆ ಗೌರವಾರ್ಪಣೆ ಜರುಗಲಿದೆ. ಬೆಳಗಾವಿಯ ಖ್ಯಾತ ಸಾಹಿತಿ ಡಾ. ಬಸವರಾಜ ಜಗಜಂಪಿ ಉಪನ್ಯಾಸ ನೀಡಲಿದ್ದಾರೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ತಿಳಿಸಿದ್ದಾರೆ.