ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೩೧; ದೇಶದ ಅತೀ ಪ್ರಮುಖ ಬ್ಯಾಂಕ್ ನೌಕರರ ಸಂಘಟನೆಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಬ್ಯಾಂಕ್‌ಗಳಲ್ಲಿ ಅಗತ್ಯವಿರುವ ನೇಮಕಾತಿಗೆ ಒತ್ತಾಯಿಸಿ, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು-ಅನುಷ್ಠಾನಗೊಳಿಸಲು ಒತ್ತಾಯಿಸಿ ಮತ್ತು ಬ್ಯಾಂಕ್ ಉದ್ಯೋಗಗಳ ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿ ಸೆಪ್ಟೆಂಬರ್ 2023 ರಿಂದ ಜನವರಿ 2024 ರವರೆಗೆ ಸುದೀರ್ಘ ಅವಧಿಯ ಹೋರಾಟವನ್ನು ಹಮ್ಮಿಕೊಂಡಿದೆ ಎಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂ.ಕೆ.ರಾಘವೇಂದ್ರ ನಾಯರಿ ಹೇಳಿದರು.ಈ ಹೋರಾಟದ ಭಾಗವಾಗಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್ ಜಿಲ್ಲಾವಾರು ಸದಸ್ಯರ ಸಭೆಯನ್ನು ಆಯೋಜಿಸಲು ಕರೆ ನೀಡಿದೆ. ಅದರಂತೆ ನಾಳೆ ಬೆಳಿಗ್ಗೆ 10.30 ಘಂಟೆಗೆ ದಾವಣಗೆರೆಯ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಸದಸ್ಯರ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಸಭೆಗೆ ಮುಖ್ಯ ಭಾಷಣಕಾರರಾಗಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್‌ನ ಜಂಟಿ ಕಾರ್ಯದರ್ಶಿ ಕಾಂ.ಸ್ಟೀಫನ್ ಜಯಚಂದ್ರ ಅವರು ಆಗಮಿಸುವರು.ಬ್ಯಾಂಕಿಂಗ್ ಕ್ಷೇತ್ರದ ಅತೀ ಮುಖ್ಯವಾದ ಸಮಸ್ಯೆಗಳ ವಿರುದ್ಧದ ಹೋರಾಟದ ಭಾಗವಾಗಿ ಆಯೋಜಿಸಿರುವ ಈ ಸಭೆಗೆ ದಾವಣಗೆರೆ ಜಿಲ್ಲೆಯ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ತಪ್ಪದೇ ಹಾಜರಾಗಲು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘವು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದೆ.