ನಾಳೆ ಅಂತ್ಯಕ್ರಿಯೆ ಸಿ.ಎಂ. ಸ್ಪಷ್ಟನೆ

ಬೆಂಗಳೂರು,ಅ.೩೦- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರ ದರ್ಶನಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಅಂತಿಮ ದರ್ಶನ ಸಿಗಲಿ ಎಂಬ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ ನಡೆಸುವ ತೀರ್ಮಾನ ಮಾಡಿರುವುದಾಗಿ ಅವರು ಹೇಳಿದರು.
ಪುನೀತ್ ರಾಜ್‌ಕುಮಾರ್ ಅವರ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರ ಜತೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿಗಳು ನಾಳೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಡೆಸುವ ತೀರ್ಮಾನ ಪ್ರಕಟಿಸಿದರು.
ವಿದೇಶದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಇಂದು ಸಂಜೆ ಬೆಂಗಳೂರಿಗೆ ಬಂದ ನಂತರ ಅಂತ್ಯಸಂಸ್ಕಾರವನ್ನು ಇಂದು ಸಂಜೆಯೇ ನಡೆಸುವ ತೀರ್ಮಾನವನ್ನು ಈ ಮೊದಲು ಕೈಗೊಳ್ಳಲಾಗಿತ್ತಾದರೂ ಪವರ್‌ಸ್ಟಾರ್ ದರ್ಶನಕ್ಕೆ ಅಭಿಮಾನಿಗಳ ಬಹಳ ದೊಡ್ಡ ಸಂಖ್ಯೆಯಲ್ಲಿ ರಾಜ್ಯದ ಎಲ್ಲೆಡೆಯಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಪಾರ್ಥೀವ ಶರೀರದ ದರ್ಶನ ಮಾಡಿಕೊಡಲು ಅಂತ್ಯಕ್ರಿಯೆಯನ್ನು ನಾಳೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ.
ಇಂದು ಇಡೀ ದಿನ ನಾಳೆ ಬೆಳಿಗ್ಗೆವರೆಗೂ ಕಂಠೀರವ ಕ್ರೀಡಾಂಗಣದಲ್ಲೇ ಅಭಿಮಾನಿಗಳ ದರ್ಶನಕ್ಕೆ ಅವಕಾಶ ನೀಡಿ ನಾಳೆ ಬೆಳಿಗ್ಗೆ ಮೆರವಣಿಗೆಯ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.