ನಾಳೆಯ ಲಸಿಕೆ ಅಭಿಯಾನ ಮುಂದೂಡಿಕೆ

ಬೆಂಗಳೂರು,ಏ.೩೦- ನಾಳೆಯಿಂದ ೧೮ ವರ್ಷ ಮೇಲ್ಪಟ್ಟವರಿಗೆ ಆರಂಭವಾಗಬೇಕಿದ್ದ ಕೊರೊನಾ ಲಸಿಕೆ ನೀಡಿಕೆ ಅಭಿಯಾನ
ಮುಂದಕ್ಕೆ ಹೋಗಿದೆ. ನಾಳೆ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಿಲ್ಲ. ಹಾಗಾಗಿ, ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವವರು ಲಸಿಕೆಗಾಗಿ ಸ್ವಲ್ಪದಿನ ಕಾಯಲೇಬೇಕು. ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಯಥಾಪ್ರಕಾರ ಮುಂದುವರೆಯಲಿದೆ.
೧೮ ರಿಂದ ೪೫ ವರ್ಷ ವಯಸ್ಸಿನವರಿಗೆ ಲಸಿಕೆ ನೀಡಿಕೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಸರ್ಕಾರ ಇನ್ನು ಸ್ಪಷ್ಟದಿನಾಂಕವನ್ನು ಪ್ರಕಟಿಸಿಲ್ಲವಾದರೂ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಮೇ ೪ನೇ ವಾರದಿಂದ ರಾಜ್ಯದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಲಿದೆ.
ರಾಜ್ಯದಲ್ಲಿ ನಾಳೆ (ಮೇ ೧) ೧೮ ರಿಂದ ೪೫ ವರ್ಷದವರು ಯಾರೂ ಲಸಿಕಾ ಕೇಂದ್ರಕ್ಕೆ ಹೋಗಬಾರದು. ೧೮ ವರ್ಷ ಮೇಲ್ಪಟ್ಟವರಿಗೆ ನಾಳೆ ಲಸಿಕೆ ನೀಡಿಕೆ ಅರಂಭವಾಗುತ್ತಿಲ್ಲ. ಅಧಿಕೃತವಾಗಿ ಲಸಿಕೆ ಪೂರೈಕೆ ಬಗ್ಗೆ ಮಾಹಿತಿ ಬಂದ ನಂತರ ಲಸಿಕೆ ನೀಡಿಕೆ ದಿನಾಂಕವನ್ನು ಪ್ರಕಟಿಸುವುದಾಗಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ರಾಜ್ಯಸರ್ಕಾರ ಪೂನಾದ ಸೀರಂ ಇನ್ಸಿಟಿಟ್ಯೂಟ್‌ಗೆ ೪೦೦ ಕೋಟಿ ರೂ. ಮೊತ್ತದ ೧ ಕೋಟಿ ಡೋಸ್ ಲಸಿಕೆ ಖರೀದಿಗೆ ತೀರ್ಮಾನಿಸಿ ಅದರಂತೆ ಆ ಸಂಸ್ಥೆಗೆ ಆದೇಶ ನೀಡಿತ್ತು. ಆದರೆ, ಆ ಸಂಸ್ಥೆಯಿಂದ ಲಸಿಕೆ ಪೂರೈಕೆ ಬಗ್ಗೆ ಅಧಿಕೃತ ಮಾಹಿತಿ ಬಾರದ ಕಾರಣ ನಾಳೆಯಿಂದ ಆರಂಭವಾಗಬೇಕಿದ್ದ ೧೮ ರಿಂದ ೪೪ ವರ್ಷದವರೆಗಿನ ಲಸಿಕೆ ನೀಡಿಕೆ ಮುಂದಕ್ಕೆ ಹೋಗಿದೆ ಎಂದು ಅವರು ಹೇಳಿದರು.
ಲಸಿಕೆ ಪೂರೈಕೆ ಸಾಧ್ಯವಾಗದ ಕಾರಣ ಕೋವಿ ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ೧೮ ರಿಂದ ೪೪ ವರ್ಷದವರು ನಾಳೆ ಯಾವುದೇ ಲಸಿಕೆ ಕೇಂದ್ರಕ್ಕಾಗಲಿ, ಆಸ್ಪತ್ರೆಗಾಗಲಿ ಹೋಗಬಾರದು ಎಂದು ಮನವಿ ಮಾಡಿದರು.
೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು. ರಾಜ್ಯಕ್ಕೆ ಇದುವರೆಗೂ ೯೯.೫ ಲಕ್ಷ ಡೋಸ್ ಲಸಿಕೆ ಬಂದಿದ್ದು, ಇದರಲ್ಲಿ ೯೫ ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇನ್ನೂ ೬ ಲಕ್ಷ ಡೋಸ್ ಲಸಿಕೆ ರಾಜ್ಯದಲ್ಲಿ ದಾಸ್ತಾನು ಇದೆ. ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮುಂದುವರೆಯಲಿದೆ ಎಂದರು. ರಾಜ್ಯದ ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಧ್ಯೇಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಜತೆಯೂ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಲಸಿಕೆಯನ್ನು ತರಿಸಿಕೊಂಡು ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುತ್ತೇವೆ ಎಂದರು.
ಲಸಿಕೆ ಬಗ್ಗೆ ಕಂಪನಿಯಿಂದ ಸ್ಪಷ್ಟ ಮಾಹಿತಿ ಬರುವವರೆಗೂ ಲಸಿಕೆ ನೀಡಿಕೆ ಯಾವಾಗ ಆರಂಭವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಿದ್ದರೂ ಜನ ಅಗತ್ಯ ವಸ್ತುಗಳ ಖರೀದಿಗೆ ಕೆಲವೆಡೆ ಜನ ಅನಗತ್ಯವಾಗಿ ಓಡಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನ ಜವಾಬ್ದಾರಿ ಪಾಲನೆ ಮಾಡಬೇಕು. ತಮ್ಮ ಆರೋಗ್ಯ ರಕ್ಷಣೆಯತ್ತ ಗಮನ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.