
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.27: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ಏ. 28 ನಾಳೆ ನಗರಕ್ಕೆ ಆಗಮಿಸಿ ರೋಡ್ ಷೋ ನಡೆಸುತ್ತಿದ್ದು ಭರ್ಜರಿಯಾಗಿ ಯಶಸ್ವಿಗೊಳಿಸಬೇಕೆಂದು ಪಕ್ಷದ ಪ್ರಚಾರ ಸಮಿತಿಯ ಸಂಚಾಲಕ ಅಲ್ಲಂ ಪ್ರಶಾಂತ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ನಿನ್ನೆ ಸಂಜೆ ನಗರದ ಕಮ್ಮ ಭವನದಲ್ಲಿ ಪಕ್ಷದ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಆತ್ಮೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಗರಕ್ಕೆ ಸಂಜೆ 5 ಕ್ಕೆ ಆಗಮಿಸುವ ಎಐಸಿಸಿ ನಾಯಕ ರಾಹುಲ್ ಅವರ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು, ಮುಖಂಡರು, ಭಾಗವಹಿಸಲಿದ್ದಾರೆ.
ಗ್ರಾಮೀಣ ಕೇತ್ರ ವ್ಯಾಪ್ತಿಯ ಟಿ.ಬಿ.ಸ್ಯಾನಿಡೋರಿಯಂ ನಿಂದ, ಕೌಲ್ ಬಜಾರ್ ನ ಮೇನ್ ರೋಡ್ ಮೂಲಕ ನಗರ ಕ್ಷೇತ್ರದ ಹೆಚ್. ಆರ್. ಗವಿಯಪ್ಪ ವೃತ್ತದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಯೇ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಕ್ಷದ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡು ಪಕ್ಷದ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.
ಇಷ್ಟೇ ಅಲ್ಲದೆ ಬೂತ್ ಮಟ್ಟದ ಸಮಿತಿಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೇಗೆ ಮತದಾರರನ್ನು ತಲುಪಬೇಕು ಎಂಬ ಬಗ್ಗೆ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ತಿಳಿಸಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಗುಂಟೂರಿನ ಮಾಜಿ ಶಾಸಕ ಎಐಸಿಸಿಯ ವೀಕ್ಷಕ ಮಸ್ತಾನ್, ಜಿಲ್ಲಾ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್, ಅಂಜನೇಯಲು, ರಾವೂರು ಸುನೀಲ್, ವಿಷ್ಣು ಬೋಯಪಾಟಿ, ಬ್ಲಾಕ್ ಅಧ್ಯಕ್ಷರು, ಪಾಲಿಕೆ ಸದಸ್ಯರು, ಪಕ್ಷದ ಇನ್ನಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಭ್ಯರ್ಥಿ ಪಾಲ್ಗೊಂಡಿರಲಿಲ್ಲ. ಚುನಾವಣಾ ವೆಚ್ಚ ಅವರ ಮೇಲೆ ಬೀಳುತ್ತದೆಂದು ಹೊರಗಿಡಲಾಗುತ್ತು ಎಂದು ತಿಳಿದು ಬಂದಿದೆ.