ನಾಳೆಯೊಳಗೆ ಟಿಕೆಟ್ ಗೊಂದಲ ಇತ್ಯರ್ಥ: ಜೋಶಿ ವಿಶ್ವಾಸ

ಹುಬ್ಬಳ್ಳಿ, ಏ14: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾದ್ದರಿಂದ ಕೆಲವೆಡೆ ಗೊಂದಲ ಉಂಟಾಗಿದೆ ಎಂಬುದನ್ನು ಒಪ್ಪಿಕೊಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಾಳೆಯೊಳಗೆ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷ ಗೆಲ್ಲುತ್ತದೆಯೋ ಅಲ್ಲಿ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇರುವುದು ಸ್ವಾಭಾವಿಕ ಎಂದು ಹೇಳಿದರು.
ಶೆಟ್ಟರ್‍ಗೆ ಟಿಕೆಟ್:
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‍ರಿಗೆ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸವಿದೆ ಎಂದ ಅವರು ಈ ಕುರಿತಂತೆ ಶೆಟ್ಟರ್ ಮತ್ತು ತಾವು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಿದ್ದು ನಮ್ಮ ಅಭಿಪ್ರಾಯ ಹೇಳಿದ್ದೇವೆ, ಎಲ್ಲವೂ ಸುಲಲಿತವಾಗಿ ಪರಿಹಾರವಾಗುತ್ತದೆ ಎಂದು ಹೇಳಿದರು.
ಬಿಜೆಪಿಯಲ್ಲಿ 52 ಜನ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ, ನಾವು ಕಾಂಗ್ರೆಸ್‍ನಂತೆ ವಂಶಕ್ಕೆ ಟಿಕೆಟ್ ಕೊಡುವುದಿಲ್ಲ, ಅಪ್ಪ ಮಕ್ಕಳಿಗೂ ಟಿಕೆಟ್ ನೀಡುವುದಿಲ್ಲ ಎಂದವರು ನುಡಿದರು.
ಲಕ್ಷ್ಮಣ ಸವದಿಯವರು ಕಾಂಗ್ರೆಸ್‍ಗೆ ಹೋಗಬಾರದೆಂಬುದು ನಮ್ಮ ಅಪೇಕ್ಷೆ, ಸವದಿಯವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ, ಅವರಿಗೆ ನಮ್ಮ ಪಕ್ಷ ಎಲ್ಲವನ್ನೂ ಕೊಟ್ಟಿದೆ, ಇಲ್ಲಿ ಅವರಿಗೆ ಉತ್ತಮ ಭವಿಷ್ಯವಿತ್ತು ಎಂದು ಜೋಶಿ ತಿಳಿಸಿದರು.
ಅಂಬೇಡ್ಕರ್ ಅವರಿಗೆ ಸಿಗಬೇಕಾದ ಪ್ರಾಶಸ್ತ್ಯ ಕಾಂಗ್ರೆಸ್ ಕಾಲದಲ್ಲಿ ಸಿಕ್ಕಿರಲಿಲ್ಲ ಎಂದ ಅವರು, ನಾವು ಅಂಬೇಡ್ಕರ್ ಹುಟ್ಟಿದ ಸ್ಥಳದ ಅಧ್ಯಯನ, ಸ್ಥಳದ ಅಭಿವೃದ್ಧಿ ಮಾಡಿದ್ದೇವೆ, ಅವರಿಗೆ ಗೌರವ ಕೊಡುವ ಕೆಲಸ ನಮ್ಮ ಸರ್ಕಾರ ಮಾಡಿದೆ, ದೇಶದಲ್ಲಿ ಉತ್ತಮ ಸರ್ಕಾರ ಇದೆ ಎಂದು ನುಡಿದರು.