
ನವದೆಹಲಿ, ಮಾ.೩೧- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ೪೫ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಎರಡು ಹಂತಗಳಲ್ಲಿ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದ್ದು ನಾಳೆಯಿಂದ ಮತ್ತೊಂದು ಸುತ್ತಿನ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ.
ಮೊದಲ ಹಂತ ಜನವರಿ ೧೬ ರಿಂದ ಆರಂಭವಾಗಿದ್ದು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಪಡೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ ಮಾರ್ಚ್ ೧ ರಿಂದ ಆರಂಭವಾಗಿರುವ ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ೬೦ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ೪೫ ವರ್ಷ ದಾಟಿದ ರೋಗದಿಂದ ಬಳಲುತ್ತಿರುವ ಮಂದಿಗೆ ಲಸಿಕೆ ನೀಡಲಾಗುತ್ತಿದೆ.
ಇದೀಗ ನಾಳೆಯಿಂದ ದೇಶದ ಎಲ್ಲ ನಗರಗಳಲ್ಲಿ ೪೫ ವರ್ಷ ದಾಟಿದ ಸಾಮಾನ್ಯಜನರಿಗೂ ಲಸಿಕೆ ನೀಡಿಕೆ ಆರಂಭವಾಗಲಿದ್ದು ಸೋಂಕು ತಡೆಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮನೆ ಮನೆಗೆ ಲಸಿಕೆ ನೀಡಿಕೆ ಅಸಾದ್ಯ:
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ೪೫ ವರ್ಷ ದಾಟಿದ ಮಂದಿಗೆ ಲಸಿಕೆ ನೀಡುವುದು ಅಸಾಧ್ಯದ ಸಂಗತಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮನೆಮನೆಗೆ ತೆರಳಿ ಲಸಿಕೆ ನೀಡಲು ಸಾಕಷ್ಟು ಆರೋಗ್ಯ ಸಿಬ್ಬಂದಿ ಬೇಕಾಗುತ್ತದೆ ಇದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ನೀತಿ ಆಯೋಗದ ಸದಸ್ಯ ಡಾ ವಿ.ಕೆ ಪಾಲ್ ತಿಳಿಸಿದ್ದಾರೆ.
ಒಂದು ವೇಳೆ ಯಾವುದೇ ರಾಜ್ಯ ಸರ್ಕಾರ ಮನೆಮನೆಗೆ ತೆರಳಿ ಲಸಿಕೆ ಹಾಕಲು ಮುಂದಾದರೆ ಮುಂದಿನ ಎರಡು ವಾರಗಳಲ್ಲಿ ೪೫ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಯ ಬಿಡಿ ಲಸಿಕೆ ಪಡೆಯಿರಿ:
ದೇಶದಲ್ಲಿ ಕೋರೋನೋ ಸೋಂಕಿಗೆ ನೀಡಲಾಗುತ್ತಿರುವ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದೆ ಹೀಗಾಗಿ ಜನರು ಭಯ ಬಿಟ್ಟು ನಿಶ್ಚಿಂತೆಯಾಗಿ ಲಸಿಕೆ ಪಡೆಯಿರಿ ಎಂದು ಜನರಿಗೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್ ಮನವಿ ಮಾಡಿದ್ದಾರೆ.
ಜನರು ಲಸಿಕೆಯನ್ನು ಹೆಚ್ಚು ಪಡೆದಂತೆ ಕೊರೋನೋ ಸೋಂಕು ದೂರ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ನಲವತ್ತೈದು ವರ್ಷ ದಾಟಿದ ಎಲ್ಲರೂ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ನೆನ್ನೆಯ ತನಕ ೨-ಹಂತದ ಲಸಿಕಾ ಅಭಿಯಾನ ದಲ್ಲಿ ೬ ಕೋಟಿ ೨೦ ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ