ನಾಳೆಯಿಂದ 4 ಸಾವಿರ ಬಸ್ ಸಂಚಾರ: ಸಿಟಿಎಂ ಪ್ರಭಾಕರ್ ‌ರೆಡ್ಡಿ ವಿಶ್ವಾಸ

ಬೆಂಗಳೂರು,ಏ.11-ರಾಜ್ಯದಲ್ಲಿ ನಾಳೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇಂದು ರಾತ್ರಿ ವೇಳೆಗೆ ರಾಜ್ಯದ 4 ನಿಗಮಗಳಿಂದ 4 ಸಾವಿರ ಬಸ್ ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ(ಸಿಟಿಎಂ) ಪ್ರಭಾಕರ್ ‌ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಷ್ಕರದ ಮಧ್ಯೆ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ದಿನೇ ದಿನೆ ಕರ್ತವ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಸಿಬ್ಬಂದಿ ಮುಷ್ಕರದ ಮೊದಲೆರಡು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ನೌಕರರಲ್ಲಿ ಬಹುತೇಕ ಮಂದಿ ಮೊಬೈಲ್ ಆನ್ ಮಾಡಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇಂದು 2 ಸಾವಿರ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯದಲ್ಲಿ ಶೇ 20ರಷ್ಟು ಬಸ್​ಗಳು ಕಾರ್ಯಾಚರಣೆ ಮಾಡುತ್ತಿವೆ. ಕರ್ತವ್ಯಕ್ಕೆ ಬಾರದ ನೌಕರರಿಗೆ ಸಂಬಳ ನೀಡುತ್ತಿಲ್ಲ. ಈಗಲೂ ಸಮಯ ಮೀರಿಲ್ಲ. ಎಲ್ಲ ಸಿಬ್ಬಂದಿಗಳೂ ಕರ್ತವ್ಯ ಬನ್ನಿ ಎಂದು ಅವರು ಮನವಿ ಮಾಡಿಕೊಂಡರು.
ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರಲಿದೆ. ಇವತ್ತು ಸಂಜೆಯೊಳಗೆ ಎರಡು ಸಾವಿರ ಬಸ್ ಸಂಚಾರ ಮಾಡಲಿವೆ. ನಾಳೆ 3ರಿಂದ4 ಸಾವಿರ ಬಸ್​ಗಳು ಸಂಚಾರ ನಡೆಸಲಿವೆ. ನಾಡಿದ್ದು 5 ಸಾವಿರಕ್ಕೂ ಹೆಚ್ಚು ಬಸ್​ಗಳು ಸಂಚರಿಸಲಿವೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಚರಿಸಿದ ಬಸ್​ಗಳೆಷ್ಟು?
ಮುಷ್ಕರದ ನಡುವೆಯೂ ರಾಜ್ಯದಲ್ಲಿ ಕೆಲ ಬಸ್‌ಗಳ ಸಂಚರಿಸಿವೆ. ಇಂದು ಮಧ್ಯಾಹ್ನ 2 ಗಂಟೆಯವರೆಗೆ 2,110 ಬಸ್‌ಗಳು ಸಂಚಾರ ಮಾಡಿವೆ. 1,000 ಕೆಎಸ್‌ಆರ್‌ಟಿಸಿ, 521 ಎನ್‌ಇಕೆಆರ್‌ಟಿಸಿ, 253 ಬಿಎಂಟಿಸಿ, 336 ಎನ್​ಡಬ್ಲ್ಯುಕೆಆರ್​ಟಿಸಿ ಬಸ್​ಗಳು ಸಂಚರಿಸಿವೆ.
ಇರುವ ಮೂರು ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ವರ್ಗಾವಣೆ ಆಗಲು ಸಾಧ್ಯವಿಲ್ಲ ಶಿವಮೊಗ್ಗ ವಿಭಾಗದಲ್ಲಿ ಈಗಾಗಲೇ 10 ಕ್ಕೂ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇರುವ ಮೂರು ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ವರ್ಗಾವಣೆ ಆಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಾನು ಕರ್ತವ್ಯಕ್ಕೆ ಹಾಜರಾಗಿರುವೆ. ಬೆಳಗ್ಗೆಯಿಂದ 10 ಸಾರಿಗೆ ಬಸ್​ಗಳ ಸಂಚಾರ ಆಗಿದೆ . ರಾತ್ರಿ ಬೆಂಗಳೂರಿಗೆ 4 ಬಸ್​ಗಳು ತೆರಳುತ್ತವೆ. ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ . ಯುಗಾದಿ ಹಬ್ಬ ಕೂಡಾ ಇದೆ. ಹೀಗಾಗಿ ಸಂಸ್ಥೆ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.  ನಾಳೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ಗಳು ಸಂಚರಿಸಲಿವೆ. ಸಿಎಂ ಯಡಿಯೂರಪ್ಪ ಆದಷ್ಟು ಬೇಗನೆ ಸಾರಿಗೆ ಸಂಘಟನೆಯ ಕಾರ್ಮಿಕರ ಮುಖಂಡರ ಜೊತೆ ಮಾತುಕತೆ ಮಾಡಬೇಕಿದೆ. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ಚಾಲಕ ಹಾಗೂ ಎಐಟಿಸಿ ಸಂಘನೆಯ ಅಧ್ಯಕ್ಷ ಗುರುರಾಜ್ ಅಡಿಗ್ ತಿಳಿಸಿದರು.
ಅಡ್ಡವಾಗಿ ಮಲಗಿದರು:
ಮುಷ್ಕರ ನಡುವೆ ಕೆಲ ನೌಕರರು ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಿದರು. ಇದೇ ವೇಳೆ ಬಸ್ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿ ಮುಷ್ಕತನಿರತ ನೌಕರರು ಬಸ್ಸ್​ಗಳಿಗೆ ಅಡ್ಡಲಾಗಿ ಮಲಗಿದರು.