ನಾಳೆಯಿಂದ 4 ದಿನ ಸಂಪೂರ್ಣ ಲಾಕ್- ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

ಕಲಬುರಗಿ,ಮೇ.26-ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ನಾಳೆಯಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ನಗರದ ಸೂಪರ್ ಮಾರ್ಕೆಟ್ ನಲ್ಲಿಂದು ಜನಜಂಗುಳಿಯೇ ಸೇರಿತ್ತು.
ನಾಲ್ಕುದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ತರಕಾರಿ, ದಿನಸಿ ಮತ್ತು ಅಗತ್ಯವಸ್ತುಗಳು ಸಿಗುವುದಿಲ್ಲ ಎಂದ ಅರಿತ ಜನ ಇಂದೇ ಅವುಗಳ ಖರೀದಿಗೆ ಮುಗಿಬಿದ್ದರು. ಲಾಕ್ ಡೌನ್ ನಿಯಮದಂತೆ ಇಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಈ ಅವಧಿಯಲ್ಲಿ ಜನ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಮಾರುಕಟ್ಟೆ ತೆರವುಗೊಳಿಸುವ ಧಾವಂತದಲ್ಲಿ ವ್ಯಾಪಾರಿಗಳು ಸಿಕ್ಕಷ್ಟು ಬೆಲೆಗೆ ತರಕಾರಿ, ಹಣ್ಣು ಮಾರಾಟ ಮಾಡಿ ಮನೆಗೆ ತೆರಳಿದರೆ, ಅತ್ತ ಗ್ರಾಹಕರು ಸಹ ಹೆಚ್ಚು ಚೌಕಾಸಿ ಮಾಡದೆ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಮಾರುಕಟ್ಟೆಯಿಂದ ಲಗುಬಗೆಯಿಂದ ಮನೆಗಳಿಗೆ ತೆರಳಿದರು.
ಸೂಪರ್ ಮಾರ್ಕೆಟ್ ರಸ್ತೆಯುದ್ದಕ್ಕೂ ವಾಹನ ಮತ್ತು ಜನದಟ್ಟಣೆ ಸೇರಿತ್ತು. ಜನ ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಮಾತ್ರ ಮಾಯವಾಗಿತ್ತು.