ನಾಳೆಯಿಂದ 18-44 ವರ್ಷದವರಿಗೆ ಲಸಿಕೆ

ಬೆಂಗಳೂರು, ಮೇ ೨೧- ಅಂತೂ-ಇಂತೂ ಕೊನೆಗೂ ೧೮ ವರ್ಷ ಮೇಲ್ಪಟ್ಟವರಿಗೆ ಣಾಳೆಯಿಂದ ಲಸಿಕೆ ಲಭ್ಯವಾಗಲಿದೆ. ಮೇ ೧ ರಂದೇ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಾಂಕೇತಿಕ ಚಾಲನೇ ನೀಡಿದ್ದರೂ ಎಲ್ಲರಿಗೂ ಲಸಿಕೆ ಸಿಕ್ಕಿರಲಿಲ್ಲ. ಲಸಿಕಾ ಕೊರತೆಯಿಂದ ೧೮ ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನ ಎರಡು ಬಾರಿ ಮುಂದಕ್ಕೆ ಹೋಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ನಾಳೆಯಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿದೆ. ಮೊದಲು ೧೮ ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳಿಗೆ ಲಸಿಕೆ ಸಿಗಲಿದ್ದು, ನಂತರ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ.
ರಾಜ್ಯದೆಲ್ಲೆಡೆ ೧೮-೪೪ ವರ್ಷ ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ನಾಳೆಯಿಂದ(ಮೇ ೨೨) ಕೋವಿಡ್ ಲಸಿಕೆ ನೀಡಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಲಸಿಕೆ ಕೊರತೆ ಉಂಟಾದ ಪರಿಣಾಮವಾಗಿ ೧೮-೪೪ ವರ್ಷದವರ ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತವಾಗಿತ್ತು. ಆದರೆ, ರಾಜ್ಯಮಟ್ಟದ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿದಂತೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಅವರು ಆದ್ಯತಾ ವಲಯವನ್ನು ಗುರುತಿಸುವುದು, ಪ್ರಮಾಣ ಪತ್ರ ನೀಡುವುದು, ಲಸಿಕಾ ಸ್ಥಳವನ್ನು ಗುರುತಿಸುವುದು ಸಹಿತ ಲಸಿಕೆಯ ಸಂಪೂರ್ಣ ಉಸ್ತುವಾರಿ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಆದ್ಯತಾ ವಲಯದ ಫಲಾನುಭವಿಗಳನ್ನು ಗುರುತಿಸಲು, ಲಸಿಕೆ ದಾಸ್ತಾನು ಪರಿಶೀಲಿಸಿ ಸೂಕ್ತವಾಗಿ ಲಸಿಕೆ ಹಾಕುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಆದೇಶದಲ್ಲಿ ತಿಳಿಸಿದ್ದಾರೆ.
ಯಾರು ಮುಂಚೂಣಿ ಕಾರ್ಯಕರ್ತರು
ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಈ ಪೈಕಿ, ಮಾಧ್ಯಮ ಸಿಬ್ಬಂದಿ, ಅಂಗವಿಕಲರು, ಚಿತಾಗಾರ, ರುದ್ರಭೂಮಿ ಸಿಬ್ಬಂದಿ, ಕೈದಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಕುಟುಂಬ ಸದಸ್ಯರು, ಕೊರೋನಾ ಸೇವೆಗೆ ನಿಯೋಜಿಸಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ.
ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು, ಭದ್ರತೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು, ತೀವ್ರ, ಅನಾರೋಗ್ಯವುಳ್ಳವರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಆಸ್ಪತ್ರೆಗಳಲ್ಲಿ ಸರಕು ಸರಬರಾಜು ಮಾಡುವವರು.
ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು, ಔಷಧ ತಯಾರಕರು, ವೃದ್ಧಾಶ್ರಮ ವಾಸಿಗಳು ಹಾಗೂ ನಿರ್ಗತಿಕರು, ಆಹಾರ ನಿಗಮ ಸಿಬ್ಬಂದಿ, ಎಪಿಎಂಸಿ ಕೆಲಸಗಾರರು.
ಅದೇ ರೀತಿ, ಆದ್ಯತಾ ಗುಂಪಿನಲ್ಲಿ ಕಟ್ಟಡ ಕಾರ್ಮಿಕರು, ಟೆಲಿಕಾಂ ಇಂಟರ್‌ನೆಟ್ ಸೇವಾದಾರರು, ವಿಮಾನ ಸಂಸ್ಥೆ ಸಿಬಂದಿ, ಬ್ಯಾಂಕ್ ಸಿಬಂದಿ, ವಕೀಲರು, ಚಿತ್ರರಂಗ ಸಿಬಂದಿ, ಹೊಟೇಲ್ ಸಿಬಂದಿ, ಕೆಎಂಎಫ್ ಸಿಬಂದಿ, ಗಾರ್ಮೆಂಟ್ಸ್ ನೌಕರರು, ರೈಲ್ವೇ ಸಿಬಂದಿ, ಅರಣ್ಯ ಇಲಾಖೆ ಸಿಬಂದಿ, ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಟಗಾರರು, ಗೇಲ್, ಎಚ್‌ಎಎಲ್, ಎಚ್‌ಎಎಲ್ ಸಿಬಂದಿ ಇದ್ದಾರೆ.

೧೮-೪೪ ವಯೋಮಿತಿ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಲಸಿಕೆ ಉತ್ಪಾದಕ ಕಂಪನಿಗಳಿಂದ ಸರ್ಕಾರ ನೇರವಾಗಿ ಲಸಿಕೆಯನ್ನು ಖರೀದಿ ಮಾಡುತ್ತಿದೆ. ಕೋವಿನ್, ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಜನರು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದಾಗಿದೆ.

ಮತ್ತೊಂದೆಡೆ ರಾಜ್ಯ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ ೨ ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಕಂತು ರಾಜ್ಯಕ್ಕೆ ಲಭ್ಯವಾಗಿದೆ.

ಈವರೆಗೂ ೯,೫೦,೦೦೦ ಕೋವಿಶೀಲ್ಡ್, ೧,೪೪,೦೦೦ ಕೋವ್ಯಾಕ್ಸಿನ್ ಸೇರಿ ಒಟ್ಟು ೧೦,೯೪,೦೦೦ ಲಸಿಕೆ(ಡೋಸ್) ಕಂಪನಿಗಳಿಂದ ಪೂರೈಕೆಯಾಗಿದೆ. ಕೇಂದ್ರ ಸರ್ಕಾರದಿಂದ ಒಟ್ಟು ೧,೧೧,೨೪,೪೭೦ ಡೋಸ್ ಪೂರೈಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಆದೇಶದಲ್ಲಿ ಕೈದಿಗಳನ್ನೂ ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯಕ್ಕೆ ೨ ಲಕ್ಷ ಡೋಸ್ ಲಸಿಕೆ
ರಾಜ್ಯಕ್ಕೆ ಇಂದು ೨ ಲಕ್ಷ ಡೋಸ್ ಕೊರೊನಾ ಲಸಿಕೆ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ. ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದು ರಾಜ್ಯ ಲಸಿಕೆ ಖರೀದಿಗಾಗಿ ನೀಡಿದ್ದ ಆದೇಶದಂತೆ ಇಂದು ೨ ಲಕ್ಷ ಡೋಸ್ ಲಸಿಕೆ ಬರಲಿದೆ ಎಂದು ಅವರು ಹೇಳಿದರು.
ಇದುವರೆಗೂ ರಾಜ್ಯಕ್ಕೆ ೧,೨೪,೨೦,೫೧೦ ಡೋಸ್ ಲಸಿಕೆ ಕೇಂದ್ರದಿಂದ ಬಂದಿದ್ದು, ಇದರಲ್ಲಿ ೧,೧೩,೨೬೩೪೦ ಕೋವಿಶಿಲ್ಡ್ ಮತ್ತು ೧೧,೬೬,೨೮೦ ಕಾವಾಕ್ಸಿನ್ ಲಸಿಕೆ ಬಂದಿದೆ ಎಂದು ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ರಾಜ್ಯಸರ್ಕಾರದ ಬಳಿ ೧೦,೯೪,೧೭೦ ಕೊರೊನಾ ಲಸಿಕೆ ದಾಸ್ತಾನು ಇದ್ದು, ಇದರಲ್ಲಿ ೯,೫೦,೦೦೦ ಕೋವಿಶೀಲ್ಡ್ ಮತ್ತು ೧,೪೪,೧೭೦ ಕಾವಾಕ್ಸಿನ್ ಲಸಿಕೆ ಸೇರಿದೆ ಎಂದು ಅವರು ಹೇಳಿದ್ದಾರೆ.