ನಾಳೆಯಿಂದ 15 ದಿನಗಳ ಕಾಲ ಪ್ರತಿಭಟನೆ, ಜಾತ್ರೆ ಅವಕಾಶವಿಲ್ಲ

ಬೆಂಗಳೂರು,ಮಾ.29-ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರವು ಮುಂದಿನ ಎರಡು ವಾರಗಳ ಕಾಲ ಯಾವುದೇ ರೀತಿಯ ಪ್ರತಿಭಟನೆ, ಜಾತ್ರೆ, ಸತ್ಯಾಗ್ರಹಗಳಿಗೆ ಅವಕಾಶ ನೀಡದಿರಲು ನಿರ್ಧಾರ ಕೈಗೊಂಡಿದೆ.


ಕೊರೊನಾ ರೂಪಾಂತರಿ ಹೆಚ್ಚಳ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಗೃಹ, ಆರೋಗ್ಯ, ಶಿಕ್ಷಣ ಸಚಿವರು ಹಾಗೂ ಇಲಾಖಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ಮುಂದಿನ 15 ದಿನಗಳ ಕಾಲ ಪ್ರತಿಭಟನೆ, ಜಾತ್ರೆ, ಸತ್ಯಾಗ್ರಹಗಳಿಗೆ ಅವಕಾಶ ನೀಡದಿರಲು ತೀರ್ಮಾನ ಕೈಗೊಂಡಿದ್ದಾರೆ.
ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ ಎಂದು ಸಭೆಯ ತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.


ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ರಾತ್ರಿ ಕರ್ಫ್ಯೂ ಸಹ ಜಾರಿಗೊಳಿಸುವುದಿಲ್ಲ. ಆದರೆ ನಾಳೆಯಿಂದ 15 ದಿನ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಪ್ರತಿಭಟನೆ, ಸತ್ಯಾಗ್ರಹಗಳಿಗೆ ಅವಕಾಶ ಇಲ್ಲ ಎಂದರು.
ಲಾಕ್ ಡೌನ್ ಬದಲಿಗೆ ರಾಜ್ಯದಲ್ಲಿ ಕೋವಿಡ್ ನಿರ್ಬಂಧಿಸಲು ಒಂದಷ್ಟು ಕಠಿಣ ನಿಯಮಗಳು ಜಾರಿಗೆ ತರಲಾಗುತ್ತಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಅಪಾರ್ಟ್ ಮೆಂಟ್ ಗಳಲ್ಲಿ ಪಾರ್ಟಿ, ಜಿಮ್ ಮತ್ತು ಈಜುಕೋಳಗಳನ್ನು ನಿಷೇಧಿಲಾಗಿದೆ ಎಂದು ಸಿಎಂ ಹೇಳಿದರು.
ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ.
ಕಲ್ಯಾಣ ಮಂಟಪಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಯಾದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಶಾಲಾ ಕಾಲೇಜು ಮುಚ್ಚುವುದಿಲ್ಲ, ಪರೀಕ್ಷೆಗಳು ಮುಗಿದ ನಂತರ ಇದರ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು.
ರಾಜ್ಯದ ಉಪ ಚುನಾವಣೆ ಪ್ರಚಾರದ ವೇಳೆಯೂ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

  • ಜಾತ್ರೆ, ಹಬ್ಬ ಆಚರಣೆಗೆ ಅವಕಾಶವಿಲ್ಲ
  • ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಿರ್ಧಾರ
  • ರಾಜ್ಯದಲ್ಲಿ ಯಾವುದೇ ಲಾಕ್​ಡೌನ್​ ಇರುವುದಿಲ್ಲ
  • ಕೋವಿಡ್​ ಸಂಬಂಧ ಜನರು ಜಾಗೃತರಾಗಿರಬೇಕು
  • ನಾಳೆಯಿಂದ ಮಾಸ್ಕ್​ ಧರಿಸದಿದ್ದರೆ ದಂಡ