ನಾಳೆಯಿಂದ ೩ ಸಾವಿರ ಜನರಿಗೆ ಉಪಹಾರ, ಊಟ, ಬೇಯಿಸಿದ ಮೊಟ್ಟೆ

ಕಾಂಗ್ರೆಸ್ ಅಪಪ್ರಚಾರ : ಲಸಿಕೆ ತಡೆ – ಎರಡನೇ ಅಲೆ ಪರಿಣಾಮ
ದೇವದುರ್ಗ.ಮೇ.೨೦- ಕೋವಿಡ್ -೧೯ ತಡೆಗೆ ಕೇಂದ್ರ ಸರ್ಕಾರ ಎರಡು ವ್ಯಾಕ್ಸಿನ್ ತಯಾರಿಸಿ ದೇಶದ ಜನರಿಗೆ ನೀಡಲು ಮುಂದಾದಾಗ ಕಾಂಗ್ರೆಸ್ ಪಕ್ಷದ ಅಜ್ಞಾನಿ ನಾಯಕರು ಅಪಪ್ರಚಾರ ಮಾಡಿದ್ದರಿಂದ, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದರಿಂದ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿ ಜನರ ಜೀವ ತಿನ್ನುತ್ತಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಅವರು ಗಂಭೀರ ಆರೋಪಿಸಿದರು.
ಪಟ್ಟಣದ ತಮ್ಮ ನೂತನ ನಿವಾಸ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೊರೊನಾ ಲಸಿಕೆ ಜನರ ಆರೋಗ್ಯಕ್ಕೆ ಭದ್ರತೆ ಒದಗಿಸಿದೆ. ಆದರೆ, ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿನ ವಿರೋಧಿಸುವ ಭರದಲ್ಲಿ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಇದರಿಂದ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುವಂತಹ ಆಯ್ತು. ಈಗ ಕೊರೊನಾ ಎರಡನೇ ಅಲ್ಲಿ ಎದ್ದಿರುವ ಕಾರಣ ಲಸಿಕೆ ಪಡೆಯಲು ಎಲ್ಲರೂ ಮುಂದೆ ಬಂದಿದ್ದಾರೆ. ಹೀಗಾಗಿ ಲಸಿಕೆ ಕೊರತೆ ಉಂಟಾಗಿದೆ. ಈ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸಲಿದೆ. ದೇಶ ಹಾಗೂ ರಾಜ್ಯದ ಜನರು ಯಾವುದೇ ಕಾರಣಕ್ಕೂ ಧೃತಿಗೆಡದೆ, ಸರ್ಕಾರದ ಮೇಲೆ ನಂಬಿಕೆ ಇರಿಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಹಾಗೂ ಫ್ರಂಟ್ಲೈನ್ ವಾರಿಯರ್ಸ್ ಗೆ ಮೂರು ಹೊತ್ತು ಉಪಾಹಾರ ಹಾಗೂ ಊಟ ನೀಡಲು ಮುಂದಾಗಿದ್ದು ಕಳೆದ ಒಂದು ವಾರದಿಂದ ಈ ಕಾರ್ಯ ನಡೆಯುತ್ತಿದೆ. ಸದ್ಯ ತಾಲೂಕಿನಲ್ಲಿ ೨೦ ಆಸ್ಪತ್ರೆಗಳಿಗೆ ಊಟ ಪಾರ್ಸೆಲ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೂರು ಆಸ್ಪತ್ರೆಗಳಿಗೆ ಆಹಾರ ಪೂರೈಸುವ ಗುರಿ ಇದೆ. ನಾಳೆಯಿಂದ ೩ ಸಾವಿರ ಜನರಿಗೆ ಉಪಹಾರ ಮತ್ತು ಊಟ ನೀಡಲಾಗುತ್ತದೆ. ಇದರೊಂದಿಗೆ ಮಧ್ಯಾಹ್ನದ ಊಟಕ್ಕೆ ಬಾಯಿಲ್ಡ್ ಎಗ್ ಮತ್ತು ಕಾಳು ನೀಡುವ ಮೂಲಕ ಪೌಷ್ಠಿಕ ಆಹಾರ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮ ತಾಯಿಯ ಆಶೀರ್ವಾದದಂತೆ ತಾಲೂಕಿನ ಎಲ್ಲರಿಗೂ ಊಟ ವಿತರಿಸುವ ಯೋಜನೆ ಇದೆ.
ಗ್ರಾ.ಪಂ.ಮಟ್ಟದಲ್ಲಿ ತಂಡ ರಕ್ಷಣೆ ಮಾಡಿ ಬಡವರು, ನಿರ್ಗತಿಕರು, ರೈತರು, ಕೂಲಿ ಕಾರ್ಮಿಕರು ಸೇರಿ ಹಸಿದು ಬಂದವರಿಗೆ ಊಟ ಕೊಡುವ ವ್ಯವಸ್ಥೆ ಮಾಡಲಾಗುವುದು. ತಜ್ಞರ ಜೊತೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಬಡವರಿಗೆ ಆಹಾರದ ಕಿಟ್ ವಿತರಿಸುವ ಗುರಿ ಇದೆ ಎಂದರು. ಪಟ್ಟಣದ ಖಾಸಗಿ ಆಸ್ಪತ್ರೆ ಆರ್.ಕೆ ಆಸ್ಪತ್ರೆ, ಕಸ್ತೂರಿ ಮಕ್ಕಳ ಬೆನಕನ ಆಸ್ಪತ್ರೆ ಹಾಗೂ ಅರಕೇರಾ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ರೆಮ್‌ಡಿಸಿವಿಲ್ ಔಷಧಿ ಹಾಗೂ ಸಿಟಿ ಸ್ಕ್ಯಾನ್ ಆರಂಭಿಸಲು ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ೨.೫೦ ಬೆಡ್ಡಿನ ಕೊರೋನಾ ಸಿಟಿ ಸ್ಕ್ಯಾನಿಂಗ್ ಹಾಗೂ ಆಕ್ಸಿಜನ ಆಸ್ಪತ್ರೆ ತೆರೆಯಲು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ತಕ್ಷಣ ಎರಡು-ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸದ್ಯ ಕೊರೊನಾ ವಾರಿಯರ್ಸ್‌ಗಳಿಗೆ, ನಮ್ಮ ತಂಡ ವ್ಯಾನುಗಳಲ್ಲಿ ಉಪಹಾರ ಹಾಗೂ ಊಟ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತಿದೆ. ಜಾಲಹಳ್ಳಿ, ಗಬ್ಬೂರು, ಅರಕೇರಾ, ಮಸರಕಲ್ ಸೇರಿ ವಿವಿಧ ಭಾಗಗಳಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಲಾಕ್ ಡೌನ್ ಯಶಸ್ವಿಗೊಳಿಸಲು ಅಧಿಕಾರಿಗಳ ಜೊತೆ ಪೊಲೀಸರು ಕೈಜೋಡಿಸಲು ಸೂಚಿಸಲಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮದರ್ಕಲ್ ಗ್ರಾಮದಲ್ಲಿ ದುರ್ಗಮ್ಮ ದೇವಸ್ಥಾನ ನಿರ್ಮಾಣಕ್ಕೆ ೭.೫ ಲಕ್ಷ ರೂ. ಅನುದಾನ ನೀಡಲಾಗಿದೆಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಮಧುರಾಜ್ ಯಾಳಗಿ, ಪಿಐ ಹನುಮಂತ ದೊಡ್ಡಮನಿ, ಸಿಪಿಐ ಆರ್ ಎಂ ನದಾಫ್, ತಾಲೂಕ್ ಪಂಚಾಯತ್ ಇಓ ಪಂಪಾಪತಿ ಹಿರೇಮಠ್, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ತಾಲೂಕು ವೈದ್ಯಾಧಿಕಾರಿ ಬನದೇಶ್ವರ ಇತರರು ಇದ್ದರು.