
ನವದೆಹಲಿ, ನ.೨-ಭಾರತೀಯ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ನ.೩ರಿಂದ ೫ರವರೆಗೆ ೩ ದಿನಗಳ ’ವರ್ಲ್ಡ್ ಫುಡ್ ಇಂಡಿಯಾ ೨೦೨೩’ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್ ಪರಾಸ್ ಹೇಳಿದ್ದಾರೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ೨೩ ರಾಜ್ಯಗಳು ಮತ್ತು ವಿವಿಧ ದೇಶಗಳ ೧೨೦೦ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಾಗತಿಕ ಮೆಗಾ ಫುಡ್ ಈವೆಂಟ್‌ನ ೨ನೇ ಆವೃತ್ತಿಯಾದ ’ವರ್ಲ್ಡ್ ಫುಡ್ ಇಂಡಿಯಾ ೨೦೨೩’ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಸುಮಾರು ೮೮ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜತೆಗೆ ೬ ದೇಶಗಳ ಸಚಿವರು ಕೂಡ ಆಗಮಿಸಲಿದ್ದಾರೆ
ನ.೩ರಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನ.೫ ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಮಾರೋಪ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷವೆಂದರೆ ವಿಶ್ವದ ಅತಿ ಉದ್ದದ ದೋಸೆಯನ್ನು ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸುವುದಾಗಿದೆ. ೬೦ ರಿಂದ ೮೦ ಬಾಣಾಸಿಗರು ಸೇರಿ ೧೦೦ ಅಡಿ ಉದ್ದದ ರಾಗಿ ದೋಸೆಯನ್ನು ತಯಾರಿಸಲಿದ್ದಾರೆ ಎಂದೂ ಅವರು ನುಡಿದರು.