ನಾಳೆಯಿಂದ ಸಿಎಂ ಪ್ರಚಾರ


ಬೆಂಗಳೂರು, ಅ.೨೯- ರಾಜ ರಾಜೇಶ್ವರಿನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾ
ವಣೆಯ ಪ್ರಚಾರ ತಾರಕಕ್ಕೇರಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಮೊದಲ ಬಾರಿಗೆ ಮುಖ್ಯಮಂತ್ರಿಗಳು ಸಿರಾದಲ್ಲಿ ನಾಳೆ ಪ್ರಚಾರ ಕೈಗೊಳ್ಳಲಿದ್ದಾರೆ.
ಸಿರಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ರಾಜೇಶ್‌ಗೌಡ ಅವರ ಪರವಾಗಿ ನಾಳೆ ಮುಖ್ಯ ಮಂತ್ರಿಗಳು ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಆರ್ ಆರ್ ನಗರದಲ್ಲಿ ಇದೇ ೩೧ರ ಶನಿವಾರ ಪ್ರಚಾರದಲ್ಲಿ ಪಾಲ್ಗೊಳ್ಳುವರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರುಗಳಿಗೆ ಬಿಟ್ಟು ನೆರೆ ಪರಿಹಾರ ಮತ್ತು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉಪಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು.
ಉಪಚುನಾವಣಾ ಕಣ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಚಾರ ನಡೆಸಬೇಕು ಎಂಬ ಕೋರಿಕೆ ಪರಿಗಣಿಸಿ, ಮುಖ್ಯಮಂತ್ರಿ ಯಡಿಯೂರಪ್ಪನರು ಕೊನೆಗೂ ಉಪಚುನಾವಣಾ ಪ್ರಚಾರ ನಡೆಸಲು ಸಮ್ಮತಿ ವ್ಯಕ್ತಪಡಿಸಿ ನಾಳೆ ಸಿರಾ ನಗರ, ಮದಲೂರು ಮತ್ತಿತರ ಕಡೆ ರೋಡ್ ಶೋ, ರ್‍ಯಾಲಿಗಳನ್ನು ನಡೆಸುವರು.
ಆರ್ ಆರ್ ನಗರದಲ್ಲಿ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನವರು ಪ್ರಚಾರ ಕಣಕ್ಕೆ ಧುಮುಕಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹಮ್ಮಸ್ಸು ಬಂದಂತಾಗಿದ್ದು, ಚುನಾವಣಾ ಪ್ರಚಾರ ತಾರಕಕ್ಕೇರಿದೆ. ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಘಟಾನುಘಟಿ ನಾಯಕರುಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಈ ಉಪಚುನಾವಣೆಗಳಿಗೆ ಭಾನುವಾರ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾಗಿದೆ. ನವೆಂಬರ್ ೩ ರಂದು ಮತದಾನ ನಡೆಯಲಿದೆ.