ನಾಳೆಯಿಂದ ಸಾರಿಗೆ ನೌಕರರ ಜೈಲ್ ಬರೋ ಮುಷ್ಕರ ತೀವ್ರ

ಬೆಂಗಳೂರು,ಏ.೧೭-ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ೧೨ ನೇ ದಿನಕ್ಕೆ ಕಾಲಿಟ್ಟಿದ್ದು ಸರಕಾರದ ವಿರುದ್ಧ ನೌಕರರ ಸಮರ ನಾಳೆಯಿಂದ ಮತ್ತಷ್ಟು ತೀವ್ರಗೊಳ್ಳಲಿದೆ.
ವೇತನ ಜಾರಿ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬಂದಿ ನಡುವೆ ಉಂಟಾಗಿರುವ ಸಮರ ಮುಂದುವರೆದಿದ್ದು ಬಸ್ ಗಾಗಿ ಪ್ರಯಾಣಿಕರ ಅನುಭವಿಸುತ್ತಿರುವ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ.
ಈ ನಡುವೆ ಸಾರಿಗೆ ನೌಕರರ ಒಕ್ಕೂಟ ಸರ್ಕಾರಕ್ಕೆ ನಾಳೆಯವರೆಗೆ ಡೆಡ್‌ಲೈನ್ ನೀಡಿದ್ದು ಮಾತುಕತೆಗೆ ಮುಂದಾಗದಿದ್ದರೆ ಜೈಲ್ ಬರೋ ಚಳುವಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಜೈಲ್ ಬರೋ ಚಳವಳಿ:
ಸಾರಿಗೆ ಕೆಲಸಗಾರರ ಬಗ್ಗೆ ಸರ್ಕಾರ ತಿರಸ್ಕಾರ ಭಾವನೆ ತೋರಿಸುತ್ತಿದೆ. ಇದರಿಂದ ನೌಕರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ನೀವುಗಳು ವಿಶ್ರಾಂತಿ ಪಡೆಯಲು ಕೊರೊನಾ ತೋರಿಸುತ್ತಿದ್ದೀರಿ. ಸಮಸ್ಯೆ ಬಗ್ಗೆ ಮುಕ್ತ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ದೌರ್ಜನ್ಯದ ಮಾರ್ಗ ಅನುಸರಿಸುತ್ತಿದೆ. ಹಲವಾರು ನೌಕರರನ್ನು ಕಾರಣ ಕೊಡದೇ ಅರೆಸ್ಟ್ ಮಾಡಿ, ಭಯೋತ್ಪಾದಕರಾಗಿ ನೋಡಲಾಗುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಧೋರಣೆ ಖಂಡಿಸಿ ಒಂದು ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ನಾಳೆಯಿಂದ ಜೈಲ್ ಬರೋ ಚಳುವಳಿ ಆರಂಭವಾಗಲಿದ್ದು ಎಲ್ಲಾ ರೀತಿಯ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
೩೦ ರಷ್ಟು ಬಸ್ ಸಂಚಾರ:
ಇನ್ನೂ ಮುಷ್ಕರದ ಪರಿಣಾಮ ರಾಜ್ಯದಲ್ಲಿ ಕೆಎಸ್‌ಆರ್ ಟಿಸಿ ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ಬಸ್ ಗಳು ಪೂರ್ಣ ಪ್ರಮಾಣದಲ್ಲಿ ರಸ್ತೆಗಳಿದಿಲ್ಲ. ಅಧಿಕಾರಿಗಳ ಕಠಿಣ ಕ್ರಮಗಳಿಂದ ಶೇ ೩೦ ರಷ್ಟು ಮಾತ್ರ ಸಂಚಾರ ನಡೆಸಿವೆ.
ಕೆಎಸ್‌ಆರ್‌ಟಿಸಿಯ ೨೨೪೫ ಬಿಎಂಟಿಸಿ ೯೫೯ ಸೇರಿದಂತೆ ೪೮೮೬ ಬಸ್‌ಗಳು ಇಂದು ಬೆಳಿಗ್ಗೆ ೧೧ರ ವೇಳೆಗೆ ಸಂಚರಿಸಿದ್ದು ಬಸ್ ಸಂಚಾರಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
೩೮೬ ನೌಕರರ ವಿರುದ್ಧ ಎಫ್‌ಐಆರ್
ಬಸ್‌ಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ನಾಲ್ಕೂ ನಿಗಮಗಳ ವ್ಯಾಪ್ತಿಯ ಒಟ್ಟು ೩೬೮ ನೌಕರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
೯೭ ಬಸ್‌ಗಳಿಗೆ ಹಾನಿಯಾಗಿದ್ದು, ಈ ಸಂಬಂಧ ೮೫ ಜನರನ್ನು ಬಂಧಿಸಲಾಗಿದೆ. ಎಸ್ಮಾ ಕಾಯ್ದೆಯಡಿಯೂ ೧೮೦ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ ೫೦ ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಹೆಚ್ಚಿದ ಪೈಪೋಟಿ:
ಸಾರಿಗೆ ಮುಷ್ಕರದ ನಡುವೆಯೂ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಹೆಚ್ಚಳವಾಗುತ್ತಿದ್ದು, ನಿಗಮದ ಬಸ್ ಚಾಲಕರು ಮತ್ತು ಖಾಸಗಿ ಬಸ್ ಚಾಲಕರ ನಡುವೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಪೈಪೋಟಿ ಶುರುವಾಗಿದೆ.
ಮುಷ್ಕರ ಆರಂಭವಾದ ದಿನದಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ದರ್ಬಾರ್ ಆರಂಭಿಸಿವೆ. ಈಗ ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ, ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಕಾರ್ಯಾಚರಣೆ ಮುಂದುವರಿದಿದೆ.
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಜನರನ್ನು ಹತ್ತಿಸಿಕೊಳ್ಳಲು ಬಸ್‌ಗಳ ಚಾಲಕರ ನಡುವೆ ಜಗಳವೇ ಏರ್ಪಡುತ್ತಿದೆ. ಖಾಸಗಿ ಬಸ್ ಹೋಗುವ ಮಾರ್ಗದಲ್ಲೇ ಹೋಗುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಪ್ರಯಾಣಿಕರೆಲ್ಲರೂ ಇಳಿದು ನಿಗಮದ ಬಸ್ ಹತ್ತಿಕೊಳ್ಳುತ್ತಾರೆ. ಇದು ಚಾಲಕರ ನಡುವಿನ ಜಗಳಕ್ಕೆ ಕಾರಣವಾಗುತ್ತಿದೆ.
ಖಾಸಗಿ ಬಸ್ ಕಡೆಗಣನೆ:
ಸಾರಿಗೆ ಸಂಸ್ಥೆ ಬಸ್‌ಗಳೇ ಇಲ್ಲದ ಸಂದರ್ಭದಲ್ಲಿ ನಾವು ಸೇವೆ ಒದಗಿಸಿದ್ದೇವೆ. ಸಂಸ್ಥೆಯ ಬಸ್‌ಗಳು ಬಂದ ಕೂಡಲೇ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಪ್ರಯಾಣಿಕರನ್ನು ಹತ್ತಿಸಿಕೊಂಡಿರುವ ಖಾಸಗಿ ಬಸ್ ಹೊರಟ ಬಳಿಕವೇ ನಿಗಮದ ಬಸ್‌ಗಳನ್ನು ನಿಲ್ದಾಣಕ್ಕೆ ತರಬೇಕು ಎಂದು ಖಾಸಗಿ ಬಸ್ ಚಾಲಕರು ಮನವಿ ಮಾಡಿದರು.
ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಇದೇ ಸ್ಥಿತಿ ಇತ್ತು. ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ, ಪ್ರಯಾಣಿಕರ ಕಡಿಮೆ ಸಂಖ್ಯೆಯಲ್ಲಿ ಇದ್ದರು.