ನಾಳೆಯಿಂದ ಸಂಸತ್ ಅಧಿವೇಶನ

ನವದೆಹಲಿ,ಜು.೧೭- ಸಂಸತ್‌ನ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದ್ದು, ಅಧಿವೇಶನದ ಮೊದಲ ದಿನ ಎಲ್ಲ ಸಂಸದರು ರಾಷ್ಟ್ರಪತಿ ಚುನಾವಣೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನೂತನ ರಾಷ್ಟ್ರಪತಿ ಆಯ್ಕೆಯ ಮತ ಚಲಾಯಿಸುವರು.
ಸಂಸತ್‌ನ ಮುಂಗಾರು ಅಧಿವೇಶನ ಆ. ೧೨ರವರೆಗೂ ನಡೆಯಲಿದ್ದು, ಈ ಅಧಿವೇಶನದಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ ಸೇರಿದಂತೆ ವಿವಿಧ ಕಲಾಪಗಳು ನಡೆಯಲಿದ್ದು, ಸುಮಾರು ೨೪ ಮಸೂದೆಗಳ ಮಂಡನೆ, ಚರ್ಚೆ, ಅಂಗೀಕಾರ ಕಲಾಪಗಳು ನಡೆಯಲಿವೆ.
ಸರ್ವ ಪಕ್ಷಗಳ ಸಭೆ
ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸುಗಮ ಕಲಾಪವನ್ನು ಗಮನದಲ್ಲಿಟ್ಟುಕೊಂಡು ಇಂದು ಸಂಸತ್ ಭವನದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ.
ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ, ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್‌ರಂಜನ್‌ಚೌಧರಿ, ಎಐಎಡಿಎಂಕೆ ಸಂಸದ ಡಾ. ತಂಬಿದೊರೈ, ವೈಎಸ್‌ಆರ್ ಸಂಸದ ವಿಜಯಸಾಯಿರೆಡ್ಡಿ, ಟಿಎಂಸಿ ಸಂಸದ ಸುದೀಪ್‌ಬಂಡೋಪಾಧ್ಯಾಯ, ಅಪ್‌ನಾ ದಳ್ ಸಂಸದೆ ಎಂಪಿ ಸುಪ್ರಿಯಾ ಪಟೇಲ್, ಕಾಂಗ್ರೆಸ್ ಸಂಸದ ಜೈರಾಂ ರಮೇಶ್, ಡಿಎಂಕೆ ಸಂಸದ ತಿರುಚಿಸಿವ ಸೇರಿದಂತೆ ವಿವಿಧ ಪಕ್ಷಗಳ ಸಂಸದರು ಭಾಗಿಯಾಗಿದ್ದಾರೆ.
ಈ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸುವ ವಿಚಾರಗಳು ಚರ್ಚೆಗೆ ಬರಲಿದ್ದು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ನಡೆದಿದೆ.
ನಾಳಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ನಿನ್ನೆ ಲೋಕಸಭೆಯ ಸ್ಪೀಕರ್ ಓಂಬಿರ್ಲಾ ಅವರು ಸರ್ವಪಕ್ಷಗಳ ಸಭೆ ನಡೆಸಿ ಎಲ್ಲ ಪಕ್ಷಗಳ ಸದನ ನಾಯಕರುಗಳಿಗೆ ಅಧಿವೇಶನದ ಬಗ್ಗೆ ಮಾಹಿತಿಯನ್ನು ನೀಡಿದರು.
ಲೋಕಸಭಾ ಅಧ್ಯಕ್ಷರನ್ನು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್, ಲೋಕಜನಶಕ್ತಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಸದನ ನಾಯಕರುಗಳು ಹಾಜರಿದ್ದರು. ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ಜೋಷಿ, ರಾಜ್ಯಸಚಿವ ಅರ್ಜುನ್‌ರಾಂ ಮೆಗಾವಾಲ್ ಭಾಗಿಯಾಗಿದ್ದರು.
ಈ ಸಭೆಗೆ ಟಿಎಂಸಿ, ಟಿಆರ್‌ಎಸ್, ಎನ್‌ಸಿಪಿ, ಬಿಎಸ್‌ಪಿ, ಎಸ್‌ಪಿ, ತೆಲುಗುದೇಶಂ, ಶಿರೋಮಣಿ ಅಕಾಲಿದಳ್, ಎಡಪಕ್ಷಗಳು ಗೈರಾಗಿದ್ದವು.
ಈ ಬಾರಿಯ ಸಂಸತ್ ಅಧಿವೇಶನ ಕೋವಿಡ್ ಶಿಷ್ಟಾಚಾರದಂತೆ ನಡೆಯಲಿದ್ದು, ಎಲ್ಲ ಸಂಸತ್ ಸದಸ್ಯರು ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮನವಿ ಮಾಡಿದರು.