ನಾಳೆಯಿಂದ ಶಾಲೆಗಳು ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.30: ನಾಳೆಯಿಂದ 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು. ಒಂದರಿಂದ ಹತ್ತನೆ ತರಗತಿವರೆಗಿನ ತರಗತಿಗಳು ಆರಂಭಿಸಲು ಸರ್ಕಾರಿ, ಅನುದಾನಿತ ಶಾಲೆಗಳು ಸಿದ್ದಗೊಂಡಿವೆ.
ರಜೆಯ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಶಾಲಾ ಕೊಠಡಿಗಳ ಬಾಗಿಲನ್ನು ನಿನ್ನೆ ಮತ್ತು ಇಂದು ತೆರೆದು ಸ್ವಚ್ಚಗೊಳಿಸಲಾಗಿದೆ. ನಾಳೆ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರನ್ನು ಹಬ್ಬದ ರೀತಿಯಲ್ಲಿ ಸ್ವಾಗತಿಸಲು ಹಲವು ಶಾಲೆಗಳಲ್ಲಿ ಸಿದ್ದತೆ ನಡೆದಿದೆ.
ಬಂದ  ಮಕ್ಕಳಿಗೆ ನಾಳೆಯಿಂದಲೇ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಿದೆ. ಅಲ್ಲದೆ ಸಿಹಿ ಊಟವನ್ನು ನಾಳೆ ನೀಡಲಿದೆಯಂತೆ.
ಇತ್ತ ಮಕ್ಕಳು ತಮ್ಮಮನೆಗಳಲ್ಲಿ ಹಳೆಯ ಸ್ಕೂಲ್ ಬ್ಯಾಗ್ ಗಳನ್ನು ಜಾಡಿಸಿಕೊಂಡು ನಾಳೆ ಶಾಲೆಗೆ ಹೋಗಲು ರೆಡಿಯಾಗುತ್ತಿದ್ದಾರೆ.
ಅನುದಾನಿತ ಶಾಲೆಗಳಲ್ಲಿ ತಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಕರೆದು ಮಕ್ಕಳನ್ನು ಸ್ವಾಗತಿಸುವ ಸಮಾರಂಭ ನಡೆಸಿ ಪುಸ್ತಕ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟಾರೆ 1507 ಶಾಲೆಗಳಿಗೆ. ಅದರಲ್ಲಿ 240 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 409 ಹಿರಿಯ ಪ್ರಾಥಮಿಕ ಶಾಲೆ, 124 ಪ್ರೌಡಶಾಲೆಗಳು ಸೇರಿ ಒಟ್ಟಾರೆ ,773 ಸರ್ಕಾರಿ ಶಾಲೆ, 79 ಅನುದಾನಿತ, 603 ಅನುದಾನ ರಹಿತ ಖಾಸಗಿ ಶಾಲೆಗಳಿವೆ.
ಒಂದರಿಂದ ಹತ್ತನೇ ತರಗತಿ ವರೆಗೆ 2,90, 912 ಮಕ್ಕಳು ನೊಂದಾಯಿಸಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಜೂನ್ ಅಂತ್ಯದವರೆಗೆ ವಿಶೇಷ ದಾಖಲಾತಿ ಆಂದೋಲನ ಶಾಲೆಯ ಸಿಬ್ಬಂದಿಯಿಂದ ನಡೆಯಲಿದೆ.
ಸಮವಸ್ತ್ರ ಮತ್ತು ಪಠ್ಯ ಪುಸ್ತಕ  ಈಗಾಗಲೇ ಎಲ್ಲಾ ಶಾಲೆಗಳಿಗೆ  ವಿತರಿಸಲಾಗಿದೆ. 1.28 ಲಕ್ಷ ಮಕ್ಕಳಿಗೆ  ಸಮವಸ್ತ್ರ ನೀಡಲಾಗುತ್ತಿದೆ.