ನಾಳೆಯಿಂದ ಶಾಲಾ-ಕಾಲೇಜು ಆರಂಭ

Preparation for the college re open at Govt Karnataka Public School Basavanagudi in Bengaluru on Thursday.  

ಬೆಂಗಳೂರು, ಡಿ. ೩೧- ಕೊರೊನಾ ಮಹಾಮಾರಿಯಿಂದ ಕಳೆದ ೯ ತಿಂಗಳಿನಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಲಾ-ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆದಿದೆ.
ಹೊಸ ವರ್ಷದ ಮೊದಲ ದಿನದಿಂದಲೇ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ತರಗತಿಗಳು ಪ್ರಾರಂಭವಾಗಲಿವೆ.
ಚೀನಾದಿಂದ ಎದಿರಾದ ಕೊರೊನಾ ಆರ್ಭಟ ಕ್ಷೀಣಿಸುತ್ತಿದಂತೆ ಬ್ರಿಟನ್‌ನ ರೂಪಾಂತರಿ ಕೊರೊನಾ ಕಾಲಿಟ್ಟಿರುವುದು ಅಂಜಿಕೆ, ಆತಂಕದಿಂದಲೇ ಪೋಷಕರು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸುವಂತಾಗಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರು ಇಂದು ನಗರದ ಕೆಲವು ಕಾಲೇಜುಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮ ಕೈಗೊಂಡಿರುವುದನ್ನು ಪರಿಶೀಲಿಸಿದರು.
ಯಾವುದೇ ಆತಂಕವಿಲ್ಲದೆ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗುವಂತೆ ವ್ಯವಸ್ಥೆಯನ್ನು ಶಾಲಾ-ಕಾಲೇಜುಗಳ ಆಡಳಿತ ಮಂಡಲಿ ಕೈಗೊಂಡಿದೆ. ಸ್ವಚ್ಚತಾ ಕ್ರಮವನ್ನು ಎಲ್ಲಾ ಶಾಲಾ- ಕಾಜೇಜುಗಳು ಕೈಗೊಂಡಿವೆ.
ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರು ಶಾಲಾ- ಕಾಲೇಜುಗಳನ್ನು ಪ್ರವೇಶಿಸುವಂತಿಲ್ಲ. ಪ್ರತಿಯೊಬ್ಬರು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಲೇಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ದೂರ ಮಾಡಲು ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.
ತರಗತಿ ಪ್ರಾರಂಭಿಸುವುದರ ಜೊತೆಗೆ ಆನ್‌ಲೈನ್ ತರಗತಿಗಳು ನಡೆಯಲಿವೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಆವರಣದಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುವುದು.